ಬಾಲಿವುಡ್ ದಿಗ್ಗಜ ಧರ್ಮೇಂದ್ರ ‌ವಿಧಿವಶ

ಮುಂಬೈ: ಬಾಲಿವುಡ್ ಚಿತ್ರರಂಗದ ಹೆಸರಾಂತ ಹಿರಿಯ ನಟ ಮತ್ತು ಮಾಜಿ ಸಂಸದ ಧರ್ಮೇಂದ್ರ ಅವರು ಸೋಮವಾರ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಧರ್ಮೇಂದ್ರ ಅವರಿಗೆ 89 ವರ್ಷ ವಯಸ್ಸಾಗಿತ್ತು.ತೀವ್ರ ಉಸಿರಾಟದ ತೊಂದರೆ ಹಾಗೂ ವಯೊಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಬಾಲಿವುಡ್ ನಲ್ಲಿ ಸುಮಾರು ಆರು ದಶಕಗಳ ಕಾಲ ಮಿಂಚಿದ್ದ ಧರ್ಮೇಂದ್ರ, 2004ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಸುಮಾರು ಐವತ್ತು ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು.

ಎರಡನೆ ಪತ್ನಿ ಹೇಮಾಮಾಲಿನಿ ಕೂಡಾ ಸಂಸದರಾಗಿದ್ದಾರೆ, ಮೂರು ಬಾರಿ ಪತ್ನಿಯನ್ನು ಗೆಲ್ಲಿಸಲು ಅವರು ಪ್ರಚಾರ ಮಾಡಿದ್ದರು.

2009ರ ನಂತರ, ಧರ್ಮೇಂದ್ರ ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿದಿದ್ದರು.

ಧರ್ಮೇಂದ್ರ 1935ರ ಡಿಸೆಂಬರ್‌ 8ರಂದು ಪಂಜಾಬ್‌ನ ಲುಧಿಯಾನದ ಸಣ್ಣ ಹಳ್ಳಿಯಲ್ಲಿ ಜನಿಸಿದ್ದರು, ಕಿರಿಯ ವಯಸ್ಸಿನಲ್ಲೇ ಪ್ರಕಾಶ್ ಕೌರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಚಿಕ್ಕ ವಯಸ್ಸಿನಿಂದಲೇ ನಟನಾಗಬೇಕು ಎಂಬ ಹಂಬಲ ಹೊಂದಿದ್ದ ಧರ್ಮೇಂದ್ರ ನಟಿಸುವುದಕ್ಕಾಗಿಯೇ ಮನೆ ಬಿಟ್ಟು ಬಂದರು. 1960ರಲ್ಲಿ ʻದಿಲ್ ಬಿ ತೇರಾ ಹಮ್ ಬಿ ತೇರೆʼ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ʻಶೋಲೆʼ ಸಿನಿಮಾ ಮೂಲಕ ದೇಶಾದ್ಯಂತ ಹೆಸರು ಮಾಡಿದರು. ಇವರ ಕಲಾ ಸೇವೆಗೆ 2012ರಲ್ಲಿ ಪದ್ಮ ಭೂಷಣ ಪ್ರಶಸ್ತಿಯೂ ಒಲಿದುಬಂದಿತು.

ಕೆಲ ದಿನಗಳ ಹಿಂದೆ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಗೋವಿಂದ, ರಿತೇಶ್‌ ದೇಶ್‌ಮುಖ್‌, ಜೆನಿಲಿಯಾ ದೇಶ್‌ಮುಖ್‌, ಅಮೀಷಾ ಪಟೇಲ್‌ ಸೇರಿದಂತೆ ಸ್ಟಾರ್‌ ನಟ-ನಟಿಯರು ಮುಂಬೈನ್‌ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ಭೇಟಿ ನೀಡಿ ಧರ್ಮೇಂದ್ರ ಅವರ ಆರೋಗ್ಯವನ್ನ ವಿಚಾರಿಸಿದ್ದರು. ಇದಾದ ಬಳಿಕ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಮಾಡಿಸಿ, ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು.

ಧರ್ಮೇಂದ್ರ ಅವರ ಮಕ್ಕಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಕೂಡಾ‌ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.

ಸಿನಿಮಾ ರಂಗಕ್ಕೆ ಇವರು ನೀಡಿರುವ ಕೊಡುಗೆ ಅಪಾರ, 300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದ ಧರ್ಮೇಂದ್ರ ʻಶೋಲೆʼ, ʻಚುಪ್ಕೆ ಚುಪ್ಕೆʼ, ʻಸೀತಾ ಔರ್ ಗೀತಾʼ ದಂತಹ ಸೂಪರ್ ಹಿಟ್ ಸಿನಿಮಾಗಳು ಮನೆ ಮಾತಾಗಿವೆ.

ಶ್ರೀರಾಮ್ ರಾಘವನ್ ನಿರ್ದೇಶನದ ‘ಇಕ್ಕೀಸ್’ ಧರ್ಮೇಂದ್ರ ಅವರ ನಟನೆಯ ಕೊನೆಯ ಚಿತ್ರ. ಇದು ಡಿಸೆಂಬರ್‌ 25ರಂದು ತೆರೆ ಕಾಣಬೇಕಿದೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ ನಟಿಸುತ್ತಿದ್ದಾರೆ.