ನೆಲಮಂಗಲ ಬಳಿ ಸರಣಿ ಅಪಘಾತ:6 ಮಂದಿ ದುರ್ಮರಣ

Spread the love

ಬೆಂಗಳೂರು: ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ನಡೆದ ಸರಣಿ ಅಪಘಾತ ಸಂಭವಿಸಿ, ಒಂದೇ ಕುಟುಂಬದ 6 ಮಂದಿ ಮೃತಪಟ್ಟ ಘಟನೆ ಬೆಂಗಳೂರಿನ ನೆಲಮಂಗಲ‌ ತಾಲೂಕಿನ ಟಿ.ಬೇಗೂರು ಬಳಿ ನಡೆದಿದೆ.

ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಟಿ.ಬೇಗೂರು ಬಳಿ ಘಟನೆ ನಡೆದಿದೆ. ಕಾರಿನ ಮೇಲೆ ಕಂಟೇನರ್‌ ಬಿದ್ದ ಪರಿಣಾಮ ಕಾರಿನಲ್ಲಿದ್ದ ಒಂದೇ ಮನೆಯ‌ 6 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ವಿಜಯಪುರದ ಇಂಜಿನಿಯರ್ ಚಂದ್ರಯಾಗಪ್ಪ, ಗೌರ ಬಾಯಿ, ದೀಕ್ಷಾ, ಧ್ಯಾನ್ ಮೃತಪಟ್ಟವರೆಂದು ಗುರುತಿಸಲಾಗಿದೆ.

ಅಪಘಾತದ ವೇಳೆ ಕಂಟೇನರ್‌ ಕಾರಿನ ಮೇಲೆ ಬಿದ್ದ ಪರಿಣಾಮ, ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ, ಕಾರು ಹೊರತೆಗೆಯಲು ಪೊಲೀಸರು ಹರಸಾಹಸಪಟ್ಟರು.

ಹೆವಿ ಲೋಡ್ ತುಂಬಿದ್ದ ಕಂಟೇನರ್‌ ಮೇಲೆತ್ತಲು ಲಾರಿ ಬೆಲ್ಟ್‌, ಚೈನ್‌ಗಳನ್ನ ತರಿಸಲಾಗಿತ್ತು. ಕೊನೆಗೆ ಹರಸಾಹಸ ಪಟ್ಟು ಮೂರು ಕ್ರೇನ್‌ಗಳ ಸಹಾಯದಿಂದ ಕಂಟೇನರ್‌ ಮೇಲೆತ್ತಿ ಕಾರನ್ನು ಹೊರತೆಗೆಯಲಾಯಿತು.

ಇದರಿಂದ ತುಮಕೂರು ರಸ್ತೆಯಲ್ಲಿ ಸುಮಾರು 10 ಕಿಮೀ ನಷ್ಟು ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು.

ವೀಕೆಂಡ್‌ ಪ್ರವಾಸಕ್ಕೆ ಹೊರಟಿದ್ದ ಕುಟುಂಬ 6 ತಿಂಗಳ ಹಿಂದೆಯಷ್ಟೇ ಕಾರು ಖರೀದಿಸಿತ್ತೆಂದು ತಿಳಿದುಬಂದಿದೆ.