ಮೈಸೂರು: ಈಶಾನ್ಯ ಭಾರತದ ರಾಜ್ಯಗಳ ಅಭಿವೃದ್ಧಿಗೆ ನರೇಂದ್ರ ಮೋದಿ ಅವರ ಸರ್ಕಾರ ಕಟಿಬದ್ಧವಾಗಿ ದುಡಿಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಕಳೆದ ಹತ್ತು ವರ್ಷಗಳಲ್ಲಿ ಈ ರಾಜ್ಯಗಳ ಶ್ರೇಯೋಭಿವೃದ್ಧಿಗೆ ಸುಮಾರು ಐದೂವರೆ ಲಕ್ಷ ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಷ್ಟ್ರೀಯ ಏಕಾತ್ಮತಾ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ನಾಗರಿಕ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ನಾಗಲ್ಯಾಂಡ್, ಸಿಕ್ಕಿಂ , ತ್ರಿಪುರ ಅಭಿವೃದ್ಧಿಗೆ ಕಳೆದ ಎಪ್ಪತ್ತು ವರ್ಷಗಳಲ್ಲಿ ಕಂಡೂ ಕೇಳರಿಯದಷ್ಟು ಅಭಿವೃದ್ಧಿಗೆ ಮೋದಿ ಅವರು ಒತ್ತು ಕೊಡುತ್ತಿದ್ದಾರೆ ಎಂದು ನುಡಿದರು.
ಈಶಾನ್ಯ ರಾಜ್ಯಗಳಲ್ಲಿ ಅನುಷ್ಠಾನ ಆಗುತ್ತಿರುವ ಕಾರ್ಯಕ್ರಮಗಳನ್ನು ಗಮನವಿಟ್ಟು ಪರಿಶೀಲನೆ ಮಾಡಬೇಕು ಎಂದು ಸೂಚಿಸಿದ್ದಾರೆ. ಅದರಂತೆ ನಾನೂ ಕಳೆದ ವರ್ಷ ನಾಲ್ಕು ದಿನಗಳ ಕಾಲ ನಾಗಲ್ಯಾಂಡ್, ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯಗಳಿಗೆ ಭೇಟಿ ನೀಡಿದ್ದೆ. ಅಲ್ಲಿ ಕೈಗಾರಿಕೆಗಳ ಪ್ರಗತಿ ಪರಿಶೀಲನೆ ನಡೆಸುವುದರ ಜತೆಗೆ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ದೆ ಎಂದು ಹೇಳಿದರು.
1996ರಲ್ಲಿ ದೇವೇಗೌಡರು ಪ್ರಧಾನಿಯಾಗಿ ಈಶಾನ್ಯ ಭಾಗದ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿದ ಸಂದರ್ಭವನ್ನು ಹೆಚ್ ಡಿ ಕೆ ಸ್ಮರಿಸಿದರು.
ರಾಷ್ಟ್ರೀಯ ಏಕಾತ್ಮಕಾ ಯಾತ್ರೆ ಅಂಗವಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿರುವ ನಾಗರಿಕ ಸ್ವಾಗತ ಕಾರ್ಯಕ್ರಮದ ಬಗ್ಗೆ ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು -ಕೊಡಗು ಲೋಕಸಭೆ ಕ್ಷೇತ್ರದ ಸಂಸದ ಯದುವೀರ ಒಡೆಯರ್ ಅವರು ಮಾತನಾಡಿದರು.
ಕಾಂಬೋಡಿಯ ದೇಶದ ಕಾನ್ಸುಲ್ ಜನರಲ್ ಆಗಿರುವ ಕಾರ್ತಿಕ್ ತಲ್ಲಂ, ಎಬಿವಿಪಿ ಅಖಿಲ ಭಾರತ ಉಪಾಧ್ಯಕ್ಷ ಪ್ರೊ. ಮಂದ್ರಾ ಭಾನುಶೇರ್, ಎಬಿವಿಪಿಯ ಮಿಜೋರಂ, ಮೇಘಾಲಯ, ನಾಗಲ್ಯಾಂಡ್ ನ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮಂಗಳಗಿ, ವಿದ್ಯಾರ್ಥಿಗಳ ಪ್ರವಾಸದ ಉಸ್ತುವಾರಿ ಡಾ. ಲಿಖಿತಾ ಗೌಡ, ಜಂಟಿ ಉಸ್ತುವಾರಿ ಪ್ರಜ್ವಲ್, ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ವಿಶ್ವಪ್ರಸಾದ್ ಆಳ್ವಾ, ಉಪಾಧ್ಯಕ್ಷ ಪ್ರೊ. ಎಂ.ಆರ್.ಗಂಗಾಧರ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಚಂದ್ರಶೇಖರ್, ಈಶಾನ್ಯ ಭಾಗದ ಏಳೂ ರಾಜ್ಯಗಳಿಂದ ಆಗಮಿಸಿದ್ದ 216ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು.