ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ ಅಮಾಯಕರಿಗೆ ಆಮ್ ಆದ್ಮಿ ಪಕ್ಷದ ವತಿಯಿಂದ ಮೊಂಬತ್ತಿ ಬೆಳಗುವ ಮೂಲಕ ಸಂತಾಪ ಸೂಚಿಸಲಾಯಿತು.

ನಗರದ ಎಂ ಜಿ ರಸ್ತೆ ಗಾಂಧಿ ಪ್ರತಿಮೆ ಬಳಿ ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಅವರ ನೇತೃತ್ವದಲ್ಲಿ ಮೊಂಬತ್ತಿ ಬೆಳಗುವ ಮೂಲಕ ಸಂತಾಪ ಸೂಚಿಸಲಾಯಿತು.
ಈ ವೇಳೆ ಮಾತನಾಡಿದ ಸೀತಾರಾಮ್ ಗುಂಡಪ್ಪ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 35000 ಸೀಟುಗಳಿದ್ದರೂ ಸರ್ಕಾರದ ಬೇಜವಾಬ್ದಾರಿತನ ದಿಂದ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಸೇರಿದ್ದರಿಂದ ಕಾಲ್ತುಳಿತ ಉಂಟಾಗಿದೆ ಎಂದು ಕಿಡಿ ಕಾರಿದರು.
ವಿಧಾನಸೌಧದ ಮುಂಭಾಗದಲ್ಲಿ ಆರ್ಸಿಬಿ ತಂಡದವರಿಗೆ ಸನ್ಮಾನ ಹಮ್ಮಿಕೊಂಡು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಗೃಹ ಸಚಿವರು ಹೀಗೆ ಸಚಿವರು ತಮ್ಮ ಕುಟುಂಬದೊಂದಿಗೆ ಬಂದು ಸೆಲ್ಫೀ ತೆಗೆದುಕೊಳ್ಳುವ ಕಾಯಕದಲ್ಲಿ ತೊಡಗಿದರು, ಇತ್ತ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಕಾಲ್ತುಳಿತ ಉಂಟಾಗಿ ಘೋರ ದುರಂತ ನಡೆದು ಹೋಯಿತು ಇದರ ಪರಿವೆಯೇ ಸರ್ಕಾರಕ್ಕೆ ಇರಲಿಲ್ಲ ಎಂದು ಟೀಕಿಸಿದರು.

ಪೊಲೀಸ್ ಇಲಾಖೆ ಮೊದಲೇ ಹೇಳಿತ್ತಂತೆ, ನಮ್ಮಲ್ಲಿರುವುದು 5,000 ಮಂದಿ ಮಾತ್ರ ಎರಡು ಮೂರು ಲಕ್ಷ ಜನ ಬಂದರೆ ರಕ್ಷಣೆ ಕೊಡಲು ಆಗುವುದಿಲ್ಲ ಎಂದು,ಆದರೂ ತರತುರಿಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಮಾರಂಭ ಆಯೋಜಿಸಿದ್ದೇ ಈ ಘನ ಘೋರ ದುರಂತ ನಡೆದು 11 ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ ಇದಕ್ಕೆ ನೇರ ರಾಜ್ಯ ಸರ್ಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೃತ ಕ್ರಿಕೆಟ್ ಅಭಿಮಾನಿಗಳ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಇದೇ ವೇಳೆ ಸೀತಾರಾಂಗುಂಡಪ್ಪ ಪ್ರಾರ್ಥಿಸಿದರು.