ಬೆಂಗಳೂರು: ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ಗುಲ್ಬರ್ಗ ಜಿಲ್ಲಾಧಿಕಾರಿ ಫೌಜಿಯ ವಿರುದ್ಧ ಮಾತನಾಡಿರುವ ರೀತಿ ನೋಡಿದರೆ ಇವರು ನಮ್ಮ ದೇಶದವರೆ ಎಂಬ ಅನುಮಾನ ಬರುತ್ತಿದೆ ಎಂದು ಆಪ್ ಹೇಳಿದೆ.
ರವಿಕುಮಾರ್ ಭಾರತ ದೇಶದವರೊ ಅಥವಾ ಪಾಕಿಸ್ತಾನದವರೋ ಎಂಬಂತಾಗಿದೆ,ಅವರ ಅವಹೇಳನಕಾರಿ ಪದಗಳು ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ಪದೇಪದೇ ಮಾಡುತ್ತಿರುವ ದಾಳಿಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಫರೀದ್ ಆರೋಪಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಇದೇ ರೀತಿಯ ಕೋಮು ಪ್ರಚೋದಿತ ಹೇಳಿಕೆಗಳನ್ನು ಅನೇಕ ಬಾರಿ ನೀಡಿ ಅಲ್ಪಸಂಖ್ಯಾತರ ದೇಶಭಕ್ತಿಯನ್ನು ಪ್ರಶ್ನಿಸುವಂತಿದೆ,
ರವಿಕುಮಾರ್ ರಾಜಕೀಯ ಕ್ಷೇತ್ರದಲ್ಲಿ ಮುಂದುವರಿಯಲು ಸಂಪೂರ್ಣ ಅನರ್ಹ ಎಂದು ಅವರು ತಿಳಿಸಿದ್ದಾರೆ.
ರವಿಕುಮಾರ್ ರನ್ನು ಈ ಕೂಡಲೇ ನಾಗರೀಕ ಸಮಾಜದಿಂದಲೇ ದೂರ ಇಡುವುದು ಸಮಾಜದ ಒಳಿತಿಗೆ ಒಳ್ಳೆಯದು ಎಂದು ಫರೀದ್ ತಿಳಿಸಿದರು.
ಅವರ ವಿರುದ್ಧ ಈಗಾಗಲೇ ವಿಧಾನಪರಿಷತ್ತಿನ ಸಭಾಪತಿಗಳ ಬಳಿ ದೂರು ಸಲ್ಲಿಸಿ ಶಾಸಕ ಪದವಿಯಿಂದ ಅನರ್ಹಗೊಳಿಸಬೇಕೆಂದು ಒತ್ತಾಯಿಸಿದ್ದೇವೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಧರ್ಮ- ಧರ್ಮ, ಜಾತಿ- ಜಾತಿ, ಭಾಷೆ -ಭಾಷೆಗಳ ನಡುವೆ ಗಲಭೆ, ಕೋಲಾಹಲಗಳನ್ನು ಸೃಷ್ಟಿಸುವ ಮೂಲಕ ಸಮಾಜದಲ್ಲಿ ಕಂದರವನ್ನು ಮೂಡಿಸುವಂತಹ ದುಷ್ಕೃತ್ಯಗಳಿಗೆ ಪದೇಪದೇ ಕೈ ಹಾಕುತ್ತಿದ್ದಾರೆ. ಇಂತವರು ಯಾವುದೇ ಕಾರಣಕ್ಕೂ ವಿಧಾನಪರಿಷತ್ತಿನಲ್ಲಿ ಸದಸ್ಯನಾಗಿ ಮುಂದುವರಿಯಲು ಯೋಗ್ಯರಲ್ಲ ಎಂದು ಫರೀದ್ ಹೇಳಿದರು.
ದೇಶದ ಸಂವಿಧಾನದ ಆಶಯಗಳ ಮೇಲೆ ಬಿಜೆಪಿಗೆ ಏನಾದರೂ ನಂಬಿಕೆ ಇದ್ದಲ್ಲಿ ಕೂಡಲೇ ರವಿಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಅವರು ಆಗ್ರಹಿಸಿದರು.