ಬೆಂಗಳೂರು: ವಿಧಾನಪರಿಷತ್ ಸದಸ್ಯ ಹಾಗೂ ಮುಖ್ಯ ಸಚೇತಕ ಎನ್. ರವಿಕುಮಾರ್ ತಮ್ಮ ಹೇಳಿಕೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಮೇಲೆ ಅವಹೇಳನ ಹೇಳಿಕೆ ನೀಡಿರುವುದು ಖಂಡನಾರ್ಹ ಎಂದು
ಆಪ್ ಟೀಕಿಸಿದೆ.
ರವಿಕುಮಾರ್ ಹೇಳಿಕೆ ದೇಶದ ಮಹಿಳಾ ಅಧಿಕಾರಿಗಳು ಹಾಗೂ ದೇಶದ ಮಹಿಳೆಯರ ಘನತೆಗೆ, ಗೌರವಕ್ಕೆ ಮಾಡಿರುವ ಘೋರ ಅಪಮಾನ,ಇಂತಹ ವ್ಯಕ್ತಿಗಳು ನಾಗರಿಕ ಸಮಾಜದಲ್ಲಿ ಇರಲು ಯೋಗ್ಯರಲ್ಲ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿ ಅಂಜನ ಗೌಡ ವಾಗ್ದಾಳಿ ನಡೆಸಿದರು.
ಪಕ್ಷದ ವತಿಯಿಂದ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ನಂತರ ಮಾತನಾಡಿದ ಅವರು,ಇಂತಹ ನೀಚ ಮನಸ್ಸಿನ ವ್ಯಕ್ತಿಯು ರಾಜ್ಯದ ಚಿಂತಕರ ಚಾವಡಿ ಯಾಗಿರುವ ವಿಧಾನಪರಿಷತ್ತಿನಲ್ಲಿ ಇರುವುದು ಹಾಗೂ ಮುಖ್ಯ ಸಚೇತಕ ಹುದ್ದೆಯಲ್ಲಿ ಮುಂದುವರೆದಿರುವುದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಮಾಡಿರುವಂತಹ ಅಪಮಾನ. ಇಂತಹ ವ್ಯಕ್ತಿಯು ಯಾವುದೇ ಕಾರಣಕ್ಕೂ ಇಂತಹ ಘನತೆಯ ಅಧಿಕಾರದಲ್ಲಿ ಮುಂದುವರಿಯಲು ಎಳ್ಳಷ್ಟು ಯೋಗ್ಯ ಅಲ್ಲ ಎಂದು ಹೇಳಿದರು.
ಕೂಡಲೇ ರವಿಕುಮಾರ್ ಅವರನ್ನು ವಿಧಾನಪರಿಷತ್ತಿನಿಂದ ಉಚ್ಛಾಟಿಸಬೇಕು ಮತ್ತು ಮುಖ್ಯ ಸಚೇತಕ ಪದವಿಯಿಂದ ಮುಂದುವರಿಯದಂತೆ ವಿಧಾನ ಪರಿಷತ್ತಿನ ಸಭಾಧ್ಯಕ್ಷರಿಗೆ ಶಿಫಾರಸ್ಸು ಮಾಡಬೇಕು ಹಾಗೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರನ್ನು ಅಂಜನಾ ಗೌಡ ಒತ್ತಾಯಿಸಿದರು.