ನೈತಿಕತೆ ಇದ್ದರೆ ಸೋಮಶೇಖರ್ ರಾಜೀನಾಮೆ ನೀಡಲಿ: ಆಪ್

Spread the love

ಬೆಂಗಳೂರು: ಬಿಜೆಪಿಯಿಂದ ಉಚ್ಛಾಟಿತವಾಗಿರುವ ಎಸ್. ಟಿ. ಸೋಮಶೇಖರ್ ಅವರು ನೈತಿಕತೆ ಇದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಪ್ ಒತ್ತಾಯಿಸಿದೆ.

ಸೋಮಶೇಖರ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ.ಅವರ ವಿರುದ್ಧದ ಕ್ರಮ ಬಹಳ ಹಿಂದೆಯೇ ಆಗಬೇಕಾಗಿತ್ತು. ಏಕೆಂದರೆ ಒಬ್ಬ ಅಭ್ಯರ್ಥಿ ಬಿಜೆಪಿ ಚಿನ್ಹೆಯಿಂದ ಸ್ಪರ್ಧಿಸಿ ಬಿಜೆಪಿ ಕಾರ್ಯಕರ್ತರನ್ನು ಬಳಸಿಕೊಂಡು ಬಿಜೆಪಿಯ ತತ್ವ ಸಿದ್ಧಾಂತಕ್ಕೆ ಬದ್ಧನಾಗಿರುವುದಾಗಿ ಹೇಳಿ ಮತದಾರರನ್ನು ಓಲೈಸಿ ಮತಗಳನ್ನು ಪಡೆದು ಗೆದ್ದ ನಂತರ ಬದಲಾಗಿದ್ದು ಎಷ್ಟು ಸರಿ ಎಂದು ಆಮ್ ಆದ್ಮಿ ಪಕ್ಷದ ಯಶವಂತಪುರ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಶಶಿಧರ್ ಆರಾಧ್ಯ ಪ್ರಶ್ನಿಸಿದ್ದಾರೆ.

ಊಸರವಳ್ಳಿ ತನ್ನ ಬಣ್ಣವನ್ನು ಬದಲಾಯಿಸುವಂತೆ ಬಿಜೆಪಿಯ ಶಾಸಕನಾಗಿದ್ದರೂ ಸೋಮಶೇಖರ್ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಹಾಜರಾಗಿ ತಮ್ಮನ್ನು ಗೆಲ್ಲಿಸಿದ ಕಾರ್ಯಕರ್ತರನ್ನು ಕಡೆಗಣಿಸಿದ್ದಕ್ಕೆ, ತಾವು ಮಾಡಿದ ಭ್ರಷ್ಟಾಚಾರಕ್ಕೆ ಅವರಿಗೆ ಇಂದು ತಕ್ಕ ಉತ್ತರ ದೊರಕಿದೆ ಎಂದು ಶಶಿಧರ್ ಆರಾಧ್ಯ ತಿಳಿಸಿದರು

ಸೋಮಶೇಖರ್ ಅಭಿವೃದ್ಧಿ ಹೆಸರಿನಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರವನ್ನು ಕಸವಂತಪುರ ಕ್ಷೇತ್ರ ಮಾಡಿದ್ದಲ್ಲದೆ ಕ್ಷೇತ್ರದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡುವವರನ್ನು ಸಾಕಿ ಸಲಹಿ ಅವರ ಪೋಷಣೆಗೆ ನಿಂತಿರುವುದು ಜಗತ್ ಜಾಹಿರಾಗಿದೆ ಎಂದು ಹೇಳಿದರು.

ತಮ್ಮನ್ನು ಪ್ರಶ್ನಿಸುವವರ ವಿರುದ್ಧ ನಾನಾ ರೀತಿಯ ಕೇಸು ಗಳನ್ನು ಹಾಕಿಸಿ ಅವರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದ್ದಾರೆ. ಇವರಿಗೆ ನಿಜವಾದ ನೈತಿಕತೆ ಇದ್ದಲ್ಲಿ ಅವರು ಈ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಜನರ ಮುಂದೆ ಬಂದು ಮತ್ತೊಮ್ಮೆ ಚುನಾವಣೆ ಎದುರಿಸಿ ತೋರಿಸಲಿ ಎಂದು ಸವಾಲು ಹಾಕಿದರು.

ಚುನಾವಣೆಗೆ ನಿಂತರೆ ನಿಮ್ಮ ನಿಜವಾದ ಬಣ್ಣ ಬಯಲಾಗುತ್ತದೆ. ಜನ ನಿಮ್ಮನ್ನು ತಿರಸ್ಕರಿಸಲು ಸಿದ್ಧರಿದ್ದಾರೆ ಇನ್ನು ಮುಂದೆ ನೀವು ಯಾವುದೇ ಕಾರಣಕ್ಕೂ ಶಾಸಕರಾಗಲು ಜನ ಒಪ್ಪುವುದಿಲ್ಲ ನೀವು ಎಲ್ಲ ರೀತಿಯಲ್ಲೂ ಈ ಕ್ಷೇತ್ರವನ್ನು ನಿರ್ಲಕ್ಷಿಸಿದ್ದೀರಿ.

ಬಿಡಿಎ, ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ರೈತರನ್ನು ಹೆದರಿಸಿ ಬೆದರಿಸಿ ಲೂಟಿ ಮಾಡಲು ಹೊರಟಿರುತ್ತೀರಿ. ಈ ಕ್ಷೇತ್ರದ ಜನರ ಕಷ್ಟಗಳಿಗೆ ಮತ್ತು ಅವರ ಜೊತೆ ಸದಾ ನಿಲ್ಲಲು ಆಮ್ ಆದ್ಮಿ ಪಾರ್ಟಿ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಶಶಿಧರ್ ಆರಾಧ್ಯ ಕಟುವಾಗಿ ಹೇಳಿದರು.