ಸಿಎಂ,ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ಸೀತಾರಾಮ್ ಗುಂಡಪ್ಪ ಆಗ್ರಹ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದಲ್ಲಿ ಅಮಾಯಕ 11 ಜನ ಅಭಿಮಾನಿಗಳ ಮರಣದ ಹೊಣೆ ಹೊತ್ತು ಸಿಎಂ,ಡಿಸಿಎಂ, ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ವನದಲ್ಲಿ
ಆಮ್ ಆದ್ಮಿ ಪಕ್ಷದಿಂದ‌ ಸರ್ಕಾರದ ‌ವಿರುದ್ಧ ಪ್ರತಿಭಟನೆ ನಡೆಸಿ ಸಿಎಂ,ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ‌ ಒತ್ತಾಯಿಸಲಾಯಿತು.

ಈ ವೇಳೆ‌ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ನಾಚಿಕೆಗೇಡಿನ, ಬಂಡತನದ ನಡೆಯಿಂದಾಗಿ 11 ಮಂದಿ ಅಮಾಯಕ ಅಭಿಮಾನಿಗಳು ಜೀವ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ನಿಸ್ಸಹಾಯಕ ಪೊಲೀಸ್ ಅಧಿಕಾರಿಗಳು ಹಾಗೂ ಕೆಲ ಕಂಪನಿಯ ನೌಕರರುಗಳನ್ನು ಬಂಧಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಕುತಂತ್ರ ನಡೆಸುತ್ತಿದೆ,ಅಮಾಯಕರ ಈ ಸಾವು ಸರ್ಕಾರಿ ಪ್ರಾಯೋಜಿತ ಕಗ್ಗೊಲೆ ಎಂಬಂತೆ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿದರು.

ಕೂಡಲೇ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಿ ತೊಲಗಬೇಕೆಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.

ಈಗಾಗಲೇ ಆಮ್ ಆದ್ಮಿ ಪಕ್ಷದ ಕಾನೂನು ಘಟಕವು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ ಪರಿಣಾಮವಾಗಿ ನ್ಯಾಯಾಲಯದಿಂದ ತಪ್ಪಿಸಿಕೊಳ್ಳಲು ಹಾಗೂ ಪ್ರಕರಣದಿಂದ ನುಣಿಚಿಕೊಳ್ಳಲು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಅಂದಾಜುಂದಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ‌ಟೀಕಿಸಿದರು.

ಜನರು ಸೂಕ್ಷ್ಮ ಕಣ್ಣುಗಳಿಂದ ಎಲ್ಲವನ್ನು ಗಮನಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಸೀತಾರಾಮ್ ಗುಂಡಪ್ಪ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಮಾತನಾಡಿ ನಮ್ಮ ಪಕ್ಷ ತಪ್ಪಿತಸ್ಥರಾಗಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ತನಕ ಸುದೀರ್ಘ ಹೋರಾಟವನ್ನು ನಡೆಸಲಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಮುಖಂಡರುಗಳಾದ ಜಗದೀಶ್ ಚಂದ್ರ, ಗೋಪಾಲ್, ಡಾ.ಯಲ್ಲಪ್ಪ, ಅನಿಲ್ ನಾಚಪ್ಪ ,ಶಶಿಧರ್ ಆರಾಧ್ಯ ,ಸರವಣನ್,ಬಸವರಾಜ್ ಮೋಹನ್ ರಾಜ್, ಅಶೋಕ್ ಮೃತ್ಯುಂಜಯ ,ಜಗದೀಶ್ ಬಾಬು,
ಭಾನು ಪ್ರಿಯಾ ,ಪುಷ್ಪಾ ಕೇಶವ್,
ಶರಣ್ಯ ,ಎಡ್ವರ್ಡ್,ಅನಿಲ್ ಕುಮಾರ್ ,ನವೀನ್ ಅಯ್ಯರ್,
ಅಣ್ಣಾ ನಾಯಕ್,ಪುಟ್ಟಣ್ಣ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.