ಶಾಸಕ ಭೈರತಿ ಬಸವರಾಜು ಬಂಧನಕ್ಕೆ ಆಮ್ ಆದ್ಮಿ ಪಕ್ಷ ಅಗ್ರಹ

Spread the love

ಬೆಂಗಳೂರು: ಬೆಂಗಳೂರಿನ ಪ್ರಮುಖ ಪ್ರದೇಶದ ರಿಯಲ್ ಎಸ್ಟೇಟ್ ವ್ಯಾಜ್ಯದಲ್ಲಿ ಕೊಲೆ ಆರೋಪಿಯಾದ ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜ್ ರನ್ನು ಕೂಡಲೇ ಬಂಧಿಸಿ ವಿಚಾರಣೆ ಗೊಳಪಡಿಸಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರನ್ನು ಇಂದು ಪಕ್ಷದ ನಿಯೋಗದೊಂದಿಗೆ ಭೇಟಿ ಮಾಡಿ ದೂರು ಸಲ್ಲಿಸಿದ ರಾಜ್ಯಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ,ಕಳೆದ ಅನೇಕ ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿರುವ ಶಾಸಕರು ಇದೀಗ ನೇರವಾಗಿ ಕೊಲೆಯಂತಹ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿರುವುದು ಶಾಂತಿಪ್ರಿಯ ಬೆಂಗಳೂರಿನ ನಾಗರಿಕರು ತಲೆತಗ್ಗಿಸುವಂತಹ ವಿಷಯವಾಗಿದೆ ಎಂದು ಹೇಳಿದರು.

ಶಾಸಕರು ಸಾಕ್ಷಿಗಳನ್ನು ನಾಶಪಡಿಸುವ ಮೊದಲೇ ಬಂಧಿಸಿ, ಬೆಂಗಳೂರು ಪೊಲೀಸ್ ಇಲಾಖೆಯವರು ಕೊಲೆಗೀಡಾದ ವ್ಯಕ್ತಿಯ ಸಂಬಂಧಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು ಹಾಗೂ ಎಷ್ಟೇ ದೊಡ್ಡ ಪ್ರಭಾವಶಾಲಿಗಳಾಗಿದ್ದರು ಸಹ ಕಾನೂನಿನ ಮುಂದೆ ಎಲ್ಲರೂ ಸರಿಸಮಾನರೆಂಬುದನ್ನು ಈ ಮೂಲಕ ಸಾಬೀತು ಮಾಡಬೇಕು ಎಂದು ತಿಳಿಸಿದರು.

ಕೊಲೆಗೀಡಾದ ವ್ಯಕ್ತಿಯು ಈ ಹಿಂದೆ ಕೋಟ್ಯಾಂತರ ರೂ ಬೆಲೆಬಾಳುವ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ಪ್ರಾಣ ಬೆದರಿಕೆ ಇತ್ತೆಂದು ಅವರ ಸಂಬಂಧಿಗಳು ತಿಳಿಸಿದ್ದಾರೆ. ಶಾಸಕರ ಒತ್ತಡದಿಂದ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ ಎಂದು ದೂರಿದರು.

ಈಗ ಹಾಡಹಗಲೇ ಒಬ್ಬ ವ್ಯಕ್ತಿ ಕೊಲೆಯಾಗಿದೆ. ಬೆಂಗಳೂರಿನ ನಾಗರಿಕರು ಬೆಚ್ಚಿ ಬೀಳುವಂತಹ ಈ ಘಟನೆಯಿಂದ ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿದೆ. ಈಗಲಾದರೂ ಶಾಸಕ ಬೈರತಿ ಬಸವರಾಜ್ ರನ್ನು ಬಂಧಿಸಿ ಬೆಂಗಳೂರಿನ ಶಾಂತಿಯನ್ನು ಕಾಪಾಡಬೇಕು ಎಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.