ಬೆಂಗಳೂರು: ದೇಶದ ಪ್ರತಿ ಹಳ್ಳಿ ಹಾಗೂ ರೈತರು ಸರ್ವತೋಮುಖ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಸಂಪೂರ್ಣ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಾಕಾರಗೊಳಿಸುವಲ್ಲಿ ತನ್ನದೇ ಪಾತ್ರ ವಹಿಸಿದ್ದ ಮನರೇಗಾ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಎಳ್ಳುನೀರು ಬಿಟ್ಟಿದೆ ಎಂದು ಆಪ್ ಕಿಡಿಕಾರಿದೆ.
ನರೇಂದ್ರ ಮೋದಿ ಪ್ರಧಾನಮಂತ್ರಿ ನೇತೃತ್ವದ ಬಿಜೆಪಿ ಸರ್ಕಾರವು ಗಾಂಧೀಜಿಯವರ ಹೆಸರನ್ನೇ ನಾಮಾವಶೇಷ ಮಾಡುವ ಮೂಲಕ ಮರುನಾಮಕರಣ ಮಾಡಲು ಹೊರಟಿರುವುದನ್ನು ಆಮ್ ಆದ್ವಿ ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಂತ್ರಿಮಂಡಲವು ಈಗಾಗಲೇ ಈ ಯೋಜನೆಗೆ ಪೂಜ್ಯ ಬಾಪು ಗ್ರಾಮೀಣ ರೋಜಗಾರ್ ಖಾತರಿ ಎಂದು ಮರುನಾಮಕರಣ ಮಾಡಲು ನಿರ್ಧರಿಸಿತ್ತು. ಆದರೆ ಏಕಾಏಕಿ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸುವ ಮೂಲಕ ಗಾಂಧೀಜಿಯವರ ಹೆಸರನ್ನು ಹೊರಗಿಟ್ಟು ಜನಪ್ರಿಯ ಕಲ್ಯಾಣ ಕಾರ್ಯಕ್ರಮದ ಯಶಸ್ಸನ್ನು ತನ್ನದಾಗಿಸಿಕೊಳ್ಳುವ ದುರುದ್ದೇಶದಿಂದ ವಿಬಿ–ಜಿ– ರಾಮ್ ಜಿ ಎಂಬಂತಹ ಜನತೆಗೆ ಗೊಂದಲವನ್ನುಂಟು ಮಾಡುವ ನಾಮಾಂಕಿತವನ್ನು ಇಡುತ್ತಿರುವುದು ಪೂಜ್ಯ ಗಾಂಧೀಜಿಯವರಿಗೆ ಮಾಡಿದಂತಹ ಪರಮ ದ್ರೋಹ ಎಂದು ಮುಖ್ಯಮಂತ್ರಿ ಚಂದ್ರು ಮಾಧ್ಯಮ ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಾಂಧೀಜಿಯವರ ಸ್ವರಾಜ್ಯ ಕಲ್ಪನೆಗೆ, ಅವರ ತ್ಯಾಗ ಬಲಿದಾನಕ್ಕೆ, ಅವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವಂತಹ ಕೋಮುವಾದಿ ಸಂಘಟನೆಗಳ ಮೂಲ ಅಜೆಂಡಾವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವು ದುಷ್ಟ ಪ್ರಯತ್ನವನ್ನು ಮಾಡುತ್ತಿರುವುದನ್ನು ಭಾರತೀಯರು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ.
ಇಡೀ ವಿಶ್ವದೆದುರು ತಲೆತಗ್ಗಿಸುವಂತಹ ಇಂತಹ ನೀಚ ಕೆಲಸಗಳಿಗೆ ಕೈ ಹಾಕುತ್ತಿರುವ ಪ್ರಧಾನಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ತೀವ್ರ ಖಂಡನೆ ವ್ಯಕ್ತಪಡಿಸುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಂಧಿ ಹೆಸರನ್ನೇ ನಾಮಾವಶೇಷ ಮಾಡಲು ಹೊರಟಿರುವ ಬಿಜೆಪಿ ಸರ್ಕಾರ:ಆಪ್