ಬೆಂಗಳೂರು ಕಸದ ಮಾಫಿಯಾ ಹಿಂದಿರುವ ಡಾನ್ ಯಾರು:ಡಿಕೆಶಿ ಉತ್ತರಿಸಲಿ ಎಎಪಿ

Spread the love

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಕಸ ವಿಲೇವಾರಿ ದೊಡ್ಡ ಮಾಫಿಯಾ ಇದೆ ಎಂಬುದನ್ನು ಒಪ್ಪಿಕೊಂಡಿದ್ದು ಇದರ ಹಿಂದಿನ ಡಾನ್ ಯಾರೆಂಬುದನ್ನು ತಿಳಿಸಲಿ ಎಂದು ಎಎಪಿ ಸವಾಲು ಹಾಕಿದೆ.

ಬೆಂಗಳೂರಿನ ಕಸದ ವಿಲೇವಾರಿ
ಬಿಗಡಾಯಿಸಿರುವ ಬಗ್ಗೆ ನಿನ್ನೆ ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಬೆಂಗಳೂರು
ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಸ ವಿಲೇವಾರಿ ದೊಡ್ಡ ಮಾಫಿಯಾ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.ಹಾಗಾದರೆ ಅನೇಕ ವರ್ಷಗಳಿಂದ ನಗರದಲ್ಲಿ ಬೀಡು ಬಿಟ್ಟಿರುವ ಈ ಕಸದ ಮಾಫಿಯಾ ಹಿಂದಿರುವ ಡಾನ್ ಯಾರೆಂಬುದನ್ನು ಶಿವಕುಮಾರ್ ಕೂಡಲೇ ಬಹಿರಂಗಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ವಿಭಾಗದ ಮುಖ್ಯಸ್ಥ ಜಗದೀಶ್ ವಿ. ಸದಂ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕಸದ ಸಮಸ್ಯೆಯು ಅನೇಕ ವರ್ಷಗಳಿಂದ ಬಿಗಡಾಯಿಸುತ್ತಲೆ ಬರುತ್ತಿದೆ. ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಯಾವ ಸರ್ಕಾರಗಳಿಗೂ ಇಚ್ಛಾಶಕ್ತಿ ಇಲ್ಲ ಎಂದು ಟೀಕಿಸಿದರು.

ಕಸದ ಮಾಫಿಯಾ ಹಿಂದಿನ ಕೋಟ್ಯಾಂತರ ರೂಪಾಯಿಗಳ ಆಮದನಿಗಳ ಹಿಂದೆಯೇ ಬೆಂಗಳೂರು ನಗರ ಶಾಸಕರ ಕಣ್ಣು ನಿರಂತರವಾಗಿದೆ. ಬಿಬಿಎಂಪಿ ಚುನಾವಣೆ ನಡೆಸದೆ ಸ್ಥಳೀಯ ಜನಪ್ರತಿನಿಧಿಗಳು ಇಲ್ಲ. ಯಾರಿಗೂ ಸಹ ಬೆಂಗಳೂರನ್ನು ಗಾರ್ಬೇಜ್ ಮುಕ್ತ ನಗರವನ್ನಾಗಿಸುವ ಇಚ್ಛಾಶಕ್ತಿಯೂ ಇಲ್ಲವೆಂಬುದು ಇದರಿಂದ ಬಹಿರಂಗವಾಗುತ್ತಿದೆ ಎಂದು ಹೇಳಿದರು.

ಕಸ ವಿಲೇ ವಾರಿಗಾಗಿಯೇ ಪ್ರತ್ಯೇಕ ಕಂಪನಿಯನ್ನು ಮಾಡಿ ಪ್ರತಿ ವರ್ಷ 3000 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದರೂ ಸಹ ಬೆಂಗಳೂರು ಕಸದ ಬ್ಲಾಕ್ ಸ್ಪಾಟ್ ಗಳಾಗಿ ಪರಿವರ್ತಿತವಾಗಿದೆ. ಬೆಂಗಳೂರಿಗರು ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಕಟ್ಟುವಲ್ಲಿ ಎರಡನೇ ಸ್ಥಾನ ಹೊಂದಿದ್ದರೂ ಸಹ ಬೆಂಗಳೂರಿಗರು ತೃತೀಯ ದರ್ಜೆಯ ನಾಗರೀಕರ ರೀತಿಯಲ್ಲಿ ವಾಸಿಸುತ್ತಿರುವುದು ನಿಜಕ್ಕೂ ದುರಂತವೇ ಸರಿ ಎಂದು ಜಗದೀಶ್ ಸರ್ಕಾರದ ವಿರುದ್ಧ ಹರಿಹಾಯ್ದರು.

ಬೆಂಗಳೂರಿನ ಪ್ರತಿ ದಿವಸದ ಸಾವಿರಾರು ಟನ್ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ , ಬೆಂಗಳೂರು ಸುತ್ತಮುತ್ತ ಡಂಪಿಂಗ್ ಯಾರ್ಡ್ ಗಳಲ್ಲಿ ಸುರಿದು ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಹಗಲು ದರೋಡೆ ಮಾಡುತ್ತಿರುವ ಮಾಫಿಯಗಳ ಹೆಡೆಮುರಿ ಕಟ್ಟಿ ಶಾಶ್ವತ ಪರಿಹಾರವನ್ನು ನೀಡುವ ಇಚ್ಛಾಶಕ್ತಿ ತೋರಿಸದ ಡಿ.ಕೆ. ಶಿವಕುಮಾರ್,ಈ ನಗರವನ್ನು ದೇವರೇ ಕಾಪಾಡಬೇಕೆಂದು ನಿಸ್ಸಹಾಯಕರಾಗಿ ಕೈ ಚೆಲ್ಲಿ ಕೂರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.

ಕೂಡಲೇ ಬಿಗಡಾಯಿಸಿರುವ ಬೆಂಗಳೂರಿನ
ಕಸದ ಸಮಸ್ಯೆಯನ್ನು ಪರಿಹರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಗದೀಶ್ ವಿ. ಸದಂ ಸರ್ಕಾರವನ್ನು ಒತ್ತಾಯಿಸಿದರು.