ಬೆಂಗಳೂರು, ಏ.5: ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರಗಳ ಇತ್ತೀಚಿನ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ, ವಿದ್ಯುತ್ ,ನೀರಿನ ದರ ಹೆಚ್ಚಳ, ಮೆಟ್ರೋ, ಆಸ್ತಿ ತೆರಿಗೆ, ಟೋಲ್, ವೀಸಾ ಶುಲ್ಕಗಳು , ರೈತರ ಪಂಪ್ಸೆಟ್ ಇತ್ಯಾದಿ ಬೆಲೆ ಏರಿಸಿರುವುದನ್ನು ಖಂಡಿಸಿ ಆಪ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಹೀಗೆ ಬೆಲೆ ಏರಿಸಿ,ಜನಸಾಮಾನ್ಯರಿಗೆ ಬರೆ ಎಳೆದಂತಾಗಿದೆ ಹಾಗೂ ಜನಸಾಮಾನ್ಯನ ಹಗಲು ದರೋಡೆ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ
ಆಕ್ರೋಶವನ್ನು ವ್ಯಕ್ತಪಡಿಸಿದರು.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪಕ್ಷದ ವತಿಯಿಂದ ಏರ್ಪಡಿಸಿದ್ಧ ಪ್ರತಿಭಟನೆಯ ನೇತೃತ್ವವನ್ನು ವಹಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಸರ್ಕಾರಿ ಖಜಾನೆಯನ್ನು ಭರ್ತಿ ಮಾಡಿಕೊಂಡು ಕಾಮಗಾರಿಗಳ ನೆಪದಲ್ಲಿ ಭ್ರಷ್ಟಾಚಾರ ಮಾಡುವ ಸಲುವಾಗಿ ತಮ್ಮದೇ ಪ್ರಜೆಗಳ ಮೇಲೆ ತುಘಲಕ್ ಮಾದರಿಯ ತೆರಿಗೆಗಳನ್ನು ಹೇರಿ ,ಎಲ್ಲ ದರಗಳನ್ನು ಹೆಚ್ಚಿಸುವ ಮೂಲಕ ದರೋಡೆ ಪ್ರವೃತ್ತಿಗೆ ಇಳಿದಿರುವುದು ದೇಶಕ್ಕೆ ಮಾರಕವಾಗಿದೆ ಎಂದು ಸೀತಾರಾಮ್ ಗುಂಡಪ್ಪ ಕಳವಳ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬೆಂಗಳೂರಿನ ನಗರ ಅಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ, ಪಕ್ಷವು ಸರ್ಕಾರದ ಈ ನಡೆಯ ವಿರುದ್ಧ ಜನಾಂದೋಲನವನ್ನು ಕೈಗೊಳ್ಳಲು ಮತದಾರರುಗಳ ಬಳಿ ಹೋಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಈ ಮೂಲಕ ಸರ್ಕಾರಗಳಿಗೆ ತಕ್ಕ ಪಾಠವನ್ನು ಕಲಿಸುವ ಕಾಲ ಸನಿಹದಲ್ಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆ ವೇಳೆ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರು, ಮುಖ್ಯ ಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳ ಮುಖವಾಡ ಧರಿಸಿ ಅಣಕು ಪ್ರದರ್ಶನ ಮಾಡಿದರು.

ತಮಟೆ ಬಾರಿಸಿ ಘೋಷಣೆಗಳನ್ನು ಕೂಗಲಾಯಿತು.ಭಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು.

ಪ್ರತಿಭಟನೆಯಲ್ಲಿ ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ, ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಮಠ, ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ಅಶೋಕ್ ಮೃತ್ಯುಂಜಯ, ಶಶಿಧರ್ ಆರಾಧ್ಯ, ಅನಿಲ್ ನಾಚಪ್ಪ, ವೀಣಾ ಸರಾವ್, ಸತ್ಯ ವಾಣಿ, ಪುಷ್ಪಕೇಶವ, ಡಾ.ಎಲ್ಲಪ್ಪ ,ಜಗದೀಶ್ ಬಾಬು, ಶಮೀರ್ ಖಾನ್, ದೊಮ್ಮಲೂರು ಶಿವಕುಮಾರ್, ಗುರುಮೂರ್ತಿ ನೆರಳದ, ಸಿದ್ದು ಸೇರಿದಂತೆ ಅನೇಕ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.