ಕರ್ನಾಟಕದ ಜನತೆ ಒಗ್ಗೂಡಿ ರಾಜಕೀಯ ಹೋರಾಟ ಮಾಡೋಣ:ರಾಜೇಶ್ ಗುಪ್ತ ಕರೆ

Spread the love

ಬೆಂಗಳೂರು: ಕರ್ನಾಟಕದ ಜನರೆಲ್ಲ ಒಗ್ಗೂಡಿ ರಾಜಕೀಯ ಹೋರಾಟ ಮಾಡೋಣ ಎಂದು
ಆಮ್ ಆದ್ಮಿ ಪಕ್ಷ ಕರ್ನಾಟಕ ನೂತನ ಉಸ್ತುವಾರಿ ರಾಜೇಶ್ ಗುಪ್ತ ಕರೆ ನೀಡಿದರು.

ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯದ ನೂತನ ಉಸ್ತುವಾರಿ ಹಾಗೂ ದೆಹಲಿಯ ಮಾಜಿ ಶಾಸಕರೂ ಆದ ರಾಜೇಶ್ ಗುಪ್ತ ಮಂಗಳವಾರ ಬೆಂಗಳೂರಿಗೆ ಆಗಮಿಸಿದ ವೇಳೆ ಸುದ್ದಿಗಾರರಿಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷವನ್ನು ಸದೃಢವಾಗಿ ಸಂಘಟಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನಸಾಮಾನ್ಯರ ಸರ್ಕಾರವನ್ನು ರಚಿಸುವುದೇ ನಮ್ಮ ಪ್ರಧಾನ ಆದ್ಯತೆಯಾಗಿದೆ ಎಂದು ತಿಳಿಸಿದರು.

ಭ್ರಷ್ಟಾಚಾರ ಮುಕ್ತ, ವಂಶಪಾರಂಪರ್ಯ ರಹಿತ ಹಾಗೂ ಪಾರದರ್ಶಕ ಆಡಳಿತವನ್ನು ದೆಹಲಿ ಹಾಗೂ ಪಂಜಾಬ್ ರಾಜ್ಯಗಳ ರೀತಿಯಲ್ಲಿ ಕರ್ನಾಟಕದಲ್ಲೂ ಸ್ಥಾಪಿಸಲು ಎಲ್ಲರೂ ಪಣತೊಡಬೇಕಿದೆ. ರಾಜ್ಯದ ಎಲ್ಲಾ ಜನಸಾಮಾನ್ಯರುಗಳು,ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪುವ ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರು ಹಾಗೂ ಕಾರ್ಯಕರ್ತರುಗಳು ಒಂದಾಗಿ ಪರಂಪರಾನುಗತ ಜೆಸಿಬಿ ಪಕ್ಷಗಳನ್ನು ಮಟ್ಟ ಹಾಕುವ ದಿಸೆಯಲ್ಲಿ ಸಕ್ರಿಯರಾಗಿ ಕಷ್ಟಪಟ್ಟು ಶ್ರಮಿಸಬೇಕೆಂದು ತಿಳಿಸಿದರು.

ರಾಜೇಶ್ ಗುಪ್ತ ಅವರು ಮೂರು ದಿವಸಗಳ ಕಾಲ ಪಕ್ಷದ ಪ್ರಧಾನ ಕಚೇರಿಯಲ್ಲಿ ರಾಜ್ಯ ಮುಖಂಡರುಗಳ ಸಭೆ ನಡೆಸಲಿದ್ದಾರೆ.

ರಾಜ್ಯಕ್ಕೆ ಆಗಮಿಸಿದ ಸಹ ಉಸ್ತುವಾರಿ ಹಾಗೂ ದೆಹಲಿ ರಾಜ್ಯದ ಮಾಜಿ ಶಾಸಕ ದಿನೇಶ್ ಮೊಹಾನೀಯ ಮಾತನಾಡಿ,
ಮುಂಬರುವ ಬೆಂಗಳೂರಿನ ಎಲ್ಲ 5 ಪಾಲಿಕೆ ಚುನಾವಣೆಗಳಲ್ಲಿ ಮತ್ತು ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ನಮ್ಮ ಪಕ್ಷದ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.

ಸಧ್ಯದಲ್ಲೇ ಬೂತ್ ಮಟ್ಟದ ಕಾರ್ಯಕರ್ತರುಗಳನ್ನು ನೇಮಿಸುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಉತ್ತಮ ಸ್ಪರ್ಧಿಗಳನ್ನು ನಿಲ್ಲಿಸುವ ಮೂಲಕ ಪರ್ಯಾಯ ರಾಜಕಾರಣವನ್ನು ಕರ್ನಾಟಕದಲ್ಲೂ ಸ್ಥಾಪಿಸಲು ಹಗಲಿರುಳು ಎಲ್ಲರೂ ದುಡಿಯಬೇಕಿದೆ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದರು.

ಮೂರೂ ಪಕ್ಷಗಳ ಆಡಳಿತ ವೈಖರಿಯನ್ನು ನೋಡಿರುವ ರಾಜ್ಯದ ಜನತೆ ಆಮ್ ಆದ್ಮಿ ಪಕ್ಷದ ಜನಸಾಮಾನ್ಯರ ಸರ್ಕಾರವನ್ನು ಪಡೆಯಲು ಹಂಬಲಿಸಿದ್ದಾರೆ ಎಂದು ತಿಳಿಸಿದರು.

ಈ‌ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆಹ್ವಾನಿ ಸೇರಿದಂತೆ ಪಕ್ಷದ ಪ್ರಮುಖ ಘಟಕಗಳ ಅಧ್ಯಕ್ಷರುಗಳು ಹಾಗೂ ಮುಖಂಡರುಗಳು ಹಾಜರಿದ್ದರು.