ಬಸ್ ದರ ಏರಿಕೆ ವಿರುದ್ಧ ವಿಶಿಷ್ಟ ಪ್ರತಿಭಟನೆ ಮಾಡಿದ ಆಮ್ ಆದ್ಮಿ ಪಕ್ಷ

Spread the love

ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ಬಸ್ ದರ ಶೇ 15 ರಷ್ಟು ಏರಿಕೆ ಮಾಡಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ವಿಶಿಷ್ಯ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಪ್ ನೂರಾರು ಕಾರ್ಯಕರ್ತರು ಎತ್ತಿನ ಬಂಡಿ ಎಳೆಯುವ ಮೂಲಕ ತೀವ್ರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಸರ್ಕಾರದ ಎತ್ತಿನ ಬಂಡಿ ಗ್ಯಾರಂಟಿ , ಸರ್ಕಾರ ಜಾಲಿ ಜಾಲಿ, ಜನರ ಜೇಬು ಖಾಲಿ ಖಾಲಿ ಎಂದು ಚಪ್ಪಾಳೆ ತಟ್ಟುತ್ತಾ ಹಾಡುತ್ತಾ ಘೋಷಣೆ ಕೂಗಿ ವಿಶಿಷ್ಟ ವಾಗಿ ಹೋರಾಟ ನಡೆಸಿ ಸರ್ಕಾರದ ಕ್ರಮವನ್ನು ವಿರೋಧಿಸಿದರು.

ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಆಮ್ ಆದ್ಮಿ ಪಕ್ಷದ ಗ್ಯಾರೆಂಟಿಗಳನ್ನು ನಕಲು ಮಾಡಿ ಅಧಿಕಾರ ಹಿಡಿದಿದೆ ಎಂದು ಟೀಕಿಸಿದರು.

ಈ ಸರ್ಕಾರಕ್ಕೆ ಭ್ರಷ್ಟಾಚಾರ ನಿಲ್ಲಿಸದೆ ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡಲಾಗುತ್ತಿಲ್ಲ.ಅದಕ್ಕಾಗಿ ದರ ಏರಿಕೆ ಮಾಡುತ್ತಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಎರಡು ಬಜೆಟ್ ಗಳಲ್ಲಿ 2 ಲಕ್ಷ ಕೋಟಿ ಸಾಲ ಮಾಡಿದ್ದಾರೆ.ಈ ದುಡ್ಡು ಯಾರ ಜೇಬು ಸೇರುತ್ತಿದೆ ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಸ್ಟ್ಯಾಂಪ್ ಡ್ಯೂಟಿ, ಅಬಕಾರಿ ಸುಂಕ, ವಿದ್ಯುತ್ ದರ, ಹಾಲಿನ ದರ ಎಲ್ಲವನ್ನು ಗಗನಕ್ಕೆ ಮುಟ್ಟಿಸಿದ್ದಾರೆ. ಈಗ ಬಸ್ ದರ ಏರಿಸಿದ್ದಾರೆ, ಮುಂದಿನ ದಿನಗಳಲ್ಲಿ ನೀರಿನ ದರವನ್ನು ಏರಿಸಲಿದ್ದಾರೆ, ಜನ ಪರ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರವು ಆರ್ಥಿಕ ದಿವಾಳಿಯಾಗುವ ಹಂತಕ್ಕೆ ತಲುಪಿರುವ ಅನುಮಾನ ಜನತೆಯಲ್ಲಿ ಕಾಡುತ್ತಿದೆ ಎಂದು‌ ತಿಳಿಸಿದರು.

ಬಸ್ ದರ ಏರಿಕೆಯನ್ನು ಕೂಡಲೇ ಹಿಂಪಡೆಯದಿದ್ದಲ್ಲಿ ಪಕ್ಷವು ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತದೆ ಎಂದು ಚಂದ್ರಶೇಖರ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡರುಗಳಾದ ನಂಜಪ್ಪ ಕಾಳೇಗೌಡ, ಲೋಹಿತ್, ಗೋಪಾಲ್ ,ಸುರೇಶ್ ,
ಡಾ. ಕೇಶವ್, ವೀಣಾ , ಭಾನುಪ್ರಿಯ, ಪುಷ್ಪ ಕೇಶವ್, ಶಶಿಧರ ಆರಾಧ್ಯ, ಅಶೋಕ್ ಮೃತ್ಯುಂಜಯ, ನವೀನ್,ಪುಟ್ಟಣ್ಣ, ಮುನೇಶ್ ಸರವಣ , ಶಾಶವಲಿ ಸೇರಿದಂತೆ ‌ಪಕ್ಷದ ಅನೇಕ ನಾಯಕರು ಭಾಗವಹಿಸಿದ್ದರು.