ಮೈಸೂರು: ಮೈಸೂರು ಅರಣ್ಯ ವೃತ್ತದಲ್ಲಿ ಆನೆ ಹಾವಳಿ ತಡೆಗೆ ತೋಡಲಾಗಿರುವ ಆನೆ ಕಂದಕಗಳು ಮತ್ತು ಸೌರ ಬೇಲಿಗಳ ಸಮರ್ಪಕ ನಿರ್ವಹಣೆ ಮಾಡುವಂತೆ ಅರಣ್ಯ
ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದರು.
ಮೈಸೂರು ಅರಣ್ಯ ಭವನದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದ ಸಚಿವರು,
ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕಾಗಿ ಕಾಡಿನಂಚಿನಲ್ಲಿ ಬಿದಿರು ಬೆಳೆಸುವುದು ಮತ್ತು ಅರಣ್ಯದೊಳಗಿನ ನೀರು ಗುಂಡಿಗಳು ಬತ್ತದಂತೆ ಸೌರ ಪಂಪ್ ಸೆಟ್ ಮೂಲಕ ಕೊಳವೆ ಬಾವಿಗಳಿಂದ ನೀರು ಹರಿಸುವುದು ಸೇರಿದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಬೇಸಿಗೆಯಲ್ಲಿ ಕಾಡ್ಗಿಚ್ಚು ಅರಣ್ಯ ನಾಶಕ್ಕೆ ಕಾರಣವಾಗುವುದರಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ತಿಳುಸಿದರು.ಒಂದು ವೇಳೆ ಕಾಡ್ಗಿಚ್ಚು ಕಾಣಿಸಿಕೊಂಡರೆ ಕೂಡಲೇ ನಂದಿಸಲು ಅಗ್ನಿಶಾಮಕ ಉಪಕರಣಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಿ, ಸಿಬ್ಬಂದಿಯನ್ನು ಸನ್ನದ್ಧವಾಗಿರುವಂತೆ ನೋಡಿಕೊಳ್ಳಿ ಎಂದು ನಿರ್ದೇಶಿಸಿದರು.
ಮೈಸೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಲಾಗಿದ್ದು, ನಗರದಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿ, ತಟ್ಟೆ, ಲೋಟ, ಬ್ಯಾನರ್, ಬಂಟಿಗ್ಸ್ ಸೇರಿದಂತೆ ಯಾವುದೇ ಏಕ ಬಳಕೆ ವಸ್ತು ಮಾರಾಟ, ಸಾಗಾಟ, ದಾಸ್ತಾನಿಗೆ ಅವಕಾಶ ಇಲ್ಲದಂತೆ ನಿಯಮಿತವಾಗಿ ತಪಾಸಣೆ ನಡೆಸಿ ದಂಡ ವಿಧಿಸಲು ಸೂಚನೆ ನೀಡಿದರು.
ಕಲುಷಿತ ನೀರು ಸೇವಿಸಿ ಯಾರೂ ಅಸ್ವಸ್ಥರಾಗಬಾರದು,ಹಾಗಾಗಿ ನಿಯಮಿತವಾಗಿ ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕ್ ಗಳ ನೀರಿನ ಗುಣಮಟ್ಟ ಪರೀಕ್ಷಿಸುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಖಂಡ್ರೆ ಸೂಚಿಸಿದರು.
ಸಭೆಯಲ್ಲಿ ಮೈಸೂರು ವೃತ್ತದ ಸಿಸಿಎಫ್ ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜು ಹಾಗೂ ಅರಣ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು.
