ಮೈಸೂರು: ಮೈಸೂರಿನಲ್ಲಿರುವ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ 76ನೇ ಭಾರತದ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಸಂವಿಧಾನ ರಕ್ಷಕ್ ಅಭಿಯಾನಕ್ಕೂ ಚಾಲನೆ ನೀಡಲಾಯಿತು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ ಹರೀಶ್ ಗೌಡ, ಭಾರತದಲ್ಲಿ ಸಂವಿಧಾನ ಜಾರಿಗೆ ಬಂದು ಭಾರತ ಗಣರಾಜ್ಯವಾಗಿದ್ದು ಇತಿಹಾಸ, ಈ ವಿಶೇಷ ದಿನದಂದು ರಾಜರು ಪಾಳೆಗಾರರು ಸಾಮ್ರಾಜ್ಯ ಶಾಹಿಗಳು ಮಾಡಿಕೊಂಡಿದ್ದ ಕಾನೂನುಗಳನ್ನು ಕಿತ್ತೆಸೆದು ಎಲ್ಲರೂ ಸಮಾನರು ನ್ಯಾಯ ನೀತಿ ಎತ್ತಿ ಹಿಡಿಯುವ ದೇಶದ ಸರ್ವೋಚ್ಚ ಕಾನೂನಾದ ಸಂವಿಧಾನವನ್ನು ಅಳವಡಿಸಿಕೊಂಡ ದಿನ ಎಂದು ಬಣ್ಣಿಸಿದರು.
ಇಂತಹ ಸಂವಿಧಾನವನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲಾ ಭಾರತದ ನಾಗರಿಕರ ಮೇಲೆ ಇದೆ ಎಂದು ನುಡಿದರು.
ಸ್ವಾಮೀಜಿ ಕಲ್ಯಾಣ್ ಸಿರಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೊರಕಿಸಿಕೊಟ್ಟ ನ್ಯಾಯ ಸೋದರತೆ ಮತ್ತು ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎಂಬುದನ್ನು ಸಾರುವ ಈ ಸಂವಿಧಾನವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಇದರ ಬಗ್ಗೆ ತಿಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲಾ ನಾಗರಿಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ವಿಜಯಕುಮಾರ್, ನಗರಾಧ್ಯಕ್ಷ ಮೂರ್ತಿ, ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಮಹಿಳಾ ಘಟಕದ ಪುಷ್ಪಲತಾ ಟಿ.ಬಿ ಚಿಕ್ಕಣ್ಣ, ಲತಾ ಸಿದ್ದ ಶೆಟ್ಟಿ, ಡಿಸಿಸಿ ಕಾರ್ಯದರ್ಶಿ ಶಿವಣ್ಣ, ಒಬಿಸಿ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ರಮೇಶ್ ರಾಮಪ್ಪ, ಮಾಜಿ ಮಹಾಪೌರರಾದ ಚಿಕ್ಕಣ್ಣ, ಮೋದಮಣಿ ಹಾಗೂ ಮುಖಂಡರಾದ ಡೈರಿ ವೆಂಕಟೇಶ್, ಮಹೇಶ್, ರವಿ ಮಂಚೇಗೌಡನ ಕೊಪ್ಪಲು, ವಿಶ್ವಕರ್ಮ ಚಂದ್ರು ಉಪಸ್ಥಿತರಿದ್ದರು.
