ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯು ಬೆಂಗಳೂರಿನಲ್ಲಿ ಜನವರಿ 18,19 ರಂದು ಆಯೋಜಿಸಿದ್ದ ಸುವರ್ಣ ಸಂಭ್ರಮ,11ನೇ ಮಹಾ ಸಮ್ಮೇಳನ ಯಶಸ್ವಿಯಾಯಿತು.
ಮೈಸೂರಿ ನಿಂದ 1000ಕ್ಕೂ ಹೆಚ್ಚಿನ ವಿಪ್ರ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮಹತ್ವದ ಹಿನ್ನಲೆ ನಿರ್ಮಾಣ ಮಾಡಿದರು.
ಈ ಸಮ್ಮೇಳನಕ್ಕೆ ಸಾರಿಗೆ ಮತ್ತು ಉಪಹಾರ ವ್ಯವಸ್ಥೆ ಮಾಡಿ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ಮೈಸೂರಿನ ಹೆಚ್ ವಿ ರಾಜೀವ್ ಅವರ ಕಾರ್ಯ ವನ್ನು ಎಲ್ಲರೂ ಪ್ರಶಂಸಿಸಿದರು.
ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ನಂ. ಶ್ರೀಕಂಠ ಕುಮಾರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ 11ನೇ ಮಹಾ ಸಮ್ಮೇಳನವು ಒಂದು ವೈಭವದ ಕಾರ್ಯಕ್ರಮವಾಗಿ ನಡೆಸಲು ಹೆಚ್ ವಿ ರಾಜೀವ್ ಅವರ ಅಮೋಘ ಸಕ್ರಿಯತೆ ಕಾರಣವಾಗಿದೆ. ಅವರ ಮಾರ್ಗದರ್ಶನವು ನಮ್ಮ ಸಮಾಜವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಹೇಳಿದರು.
ಸನ್ಮಾನ ಸ್ವೀಕಾರ ಸಂದರ್ಭದಲ್ಲಿ ಮಾತನಾಡಿದ ಹೆಚ್ ವಿ ರಾಜೀವ್,ಬ್ರಾಹ್ಮಣ ಸಮಾಜದ ಏಕತೆ ಮತ್ತು ಸಶಕ್ತೀಕರಣ ನಮ್ಮೆಲ್ಲರ ಮುಖ್ಯ ಗುರಿಯಾಗಿರಬೇಕು ಎಂದು ಕರೆ ನೀಡಿದರು.
ಇಂತಹ ಸಮ್ಮೇಳನಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಪರಸ್ಪರ ಬೆಂಬಲದ ಬಲವನ್ನು ಇತಿಹಾಸಕ್ಕೆ ನೆನಪಿಸುತ್ತವೆ. ಮೈಸೂರಿನ ಎಲ್ಲಾ ವಿಪ್ರ ಬಂಧುಗಳು ಈ ಪ್ರಯತ್ನದಲ್ಲಿ ಕೈಜೋಡಿಸಿರುವುದು ನನಗೆ ಸಂತಸ ತಂದಿದೆ ಎಂದು ತಿಳಿಸಿದರು.

ರಾಜ್ಯ ಸಮಿತಿಯ ಹಿರಿಯ ಸದಸ್ಯರಾದ ಸೌಭಾಗ್ಯ ಮೂರ್ತಿ, ವಿಶ್ವನಾಥಯ್ಯ ಮೂಗೂರು (ಕರ್ನಾಟಕ ಬ್ರಾಹ್ಮಣ ಸಂಘ), ಸಚ್ಚಿದಾನಂದ ಮೂರ್ತಿ (ಜಿಪಿ ನಗರ ಬ್ರಾಹ್ಮಣ ಸಂಘ), ಸುರೇಶ್ ಮುಳ್ಳೂರು (ವಿಪ್ರ ಜಾಗೃತಿ ವೇದಿಕೆ), ಡಾ. ಕೆ ವಿ ಲಕ್ಷ್ಮೀದೇವಿ (ವಿಪ್ರ ಮಹಿಳಾ ವೇದಿಕೆ), ರಾಮಾನುಜ ಅಭ್ಯುದಯ ಸಂಘದ ರಾಜಗೋಪಾಲ್ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದು ಬೆಂಬಲ ವ್ಯಕ್ತಪಡಿಸಿದರು.
ಸಮಾಜದ ಸರ್ವತೋಮುಖ ಪ್ರಗತಿಗೆ ಸಂಕಲ್ಪ:
ಯುವ ಸಮುದಾಯದ ಸಬಲಿಕರಣ, ಶಿಕ್ಷಣದ ಪ್ರೋತ್ಸಾಹ, ಮಹಿಳಾ ಹಕ್ಕುಗಳ ರಕ್ಷಣೆಯಂತಹ ವಿವಿಧ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುವುದಾಗಿ ಘೋಷಣೆ ಮಾಡಲಾಯಿತು.