ಮೈಸೂರಿನಲ್ಲೂ ಹಾಡಹಗಲೇ ಮುಸುಕು ಧಾರಿಗಳಿಂದ ಉದ್ಯಮಿ ದರೋಡೆ

Spread the love

ಮೈಸೂರು: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೀದರ್, ಮಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣಗಳು ಮಾಸುವ ಮುನ್ನವೇ ಈಗ ಮೈಸೂರಿನಲ್ಲೂ ಹಾಡಹಗಲೇ ದುಷ್ಕರ್ಮಿಗಳು ದರೋಡೆ ನಡೆಸಿದ್ದು,ಜನತೆ‌ ಬೆಚ್ಚಿಬಿದ್ದಿದ್ದಾರೆ.

ಮೈಸೂರು-ಮಾನಂದವಾಡಿ ರಾಜ್ಯ ಹೆದ್ದಾರಿ ಜಯಪುರ ಠಾಣೆ ವ್ಯಾಪ್ತಿಯ ಗುಜ್ಜೆಗೌಡನಪುರ ಗ್ರಾಮದ ಸೋಮವಾರ ಬೆಳಿಗ್ಗೆ 9-15ರ ಸಮಯದಲ್ಲಿ ಕೇರಳ ಉದ್ಯಮಿಯೊಬ್ಬರ ಕಾರನ್ನು(ಡಿ.ಎಲ್-08 ಸಿಎಕೆ-9775)ಅಡ್ಡಗಟ್ಟಿದ ಮುಸುಕು ದಾರಿಗಳ ಗುಂಪು ಹಲ್ಲೆ ನಡೆಸಿ,ಉದ್ಯಮಿ ಹಾಗೂ ಚಾಲಕನನ್ನು ಹೊರಗೆ ಎಳೆದು ಬಿಸಾಡಿ 1.50ಲಕ್ಷ ಹಣದ ಸಮೇತ,ಇನ್ನೊವ ಕಾರನ್ನು ಕದ್ದು ಪರಾರಿಯಾಗಿದ್ದಾರೆ.

ಕೇರಳದ ಅಡಿಕೆ ವ್ಯಾಪಾರಿ ಶಫಿ ಹಾಗೂ ಚಾಲಕ ಅಶ್ರಫ್ ಅವರ ಮೇಲೆ ದರೋಡೆಕೋರರು ಹಲ್ಲೆ ಮಾಡಿದ್ದು, ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಜಯಪುರ ಪೊಲೀಸರು ಹಲ್ಲೆಗೆ ಒಳಗಾದ ಉದ್ಯಮಿ ಮತ್ತು ಚಾಲಕನನ್ನು ಸಮೀಪದ ಹಂಪಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಕರೆದೋಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಉದ್ಯಮಿಗೆ ಹಲ್ಲೆ ಮಾಡಿದ ಮುಸುಕುದಾರಿಗಳ ಗುಂಪು ಕೃತ್ಯಕ್ಕೆ ಕೆಂಪು ಬಣ್ಣದ ಕಾರು,ಮತ್ತು ಎರ್ಟಿಗಾ ಸೇರಿದಂತೆ ಎರಡು ಕಾರುಗಳಲ್ಲಿ ಬಂದು ಅಡ್ಡಗಟ್ಟಿ ಹಲ್ಲೆ ನಡೆಸಿ, ಹಣ ಮತ್ತು ಕಾರು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಜಯಪುರ ಠಾಣಾ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ, ಹೆಚ್ಚುವರಿ ಎಸ್.ಪಿ ಮಲ್ಲಿಕ್,ಡಿವೈಎಸ್ಪಿ ರಘು,ಜಯಪುರ ಠಾಣಾ ಪಿಎಸ್ಐ ಪ್ರಕಾಶ್ ಯತ್ತಿನಮನಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.