ಹಿರಿಯ ನಾಗರಿಕರಿಗೆ ಹೊದಿಕೆ ವಿತರಿಸಿ ಹೊಸ ವರ್ಷ ಸ್ವಾಗತಿಸಿದ ಕೆ ಎಂ ಪಿ ಕೆ ಟ್ರಸ್ಟ್

Spread the love

ಮೈಸೂರು: ಹಿರಿಯ ನಾಗರಿಕರಿಗೆ ಹೊದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ಮೈಸೂರಿನ ಕೆ ಎಂ ಪಿ ಕೆ ಚಾರಿಟೆಬಲ್ ಟ್ರಸ್ಟ್ ವಿಶೇಷವಾಗಿ ಸ್ವಾಗತಿಸಿತು.

ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2025 ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ
ಅರವಿಂದ ನಗರದಲ್ಲಿರುವ ಜೆಎಸ್ಎಸ್ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರಿಗೆ ಹೊದಿಕೆ ವಿತರಿಸಿ ಮಾದರಿಯಾಯಿತು.

ಈ ವೇಳೆ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಅವರು,ಕೆ ಎಂ ಪಿ ಕೆ ಟ್ರಸ್ಟ್ ಸದಸ್ಯರು ಈಗಾಗಲೇ ಒಂದು ತಿಂಗಳ ಕಾಲ ಪ್ರತಿದಿನ ರಾತ್ರಿ ಮೈಸೂರು ನಗರದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ರಸ್ತೆಬದಿ ಹಾಗೂ ಲಾರಿ ಕೆಳಗೆ ಜೀವನ ಸಾಗಿಸುತ್ತಿರುವ ನಿರಾಶ್ರಿತರಿಗೆ ಹೊದಿಕೆ ವಿತರಿಸಿ ಮಾನವೀಯತೆ ಮೆರೆದಿದ್ದು ಟ್ರಸ್ಟ್ ಸದಸ್ಯರ ಕಾರ್ಯ ನಿಜಕ್ಕೂ ಸಂತೋಷವಾಗುತ್ತದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ಮೋಜು ಮಸ್ತಿ ಮಾಡಲು ಸ್ನೇಹಿತರೊಡನೆ ಮೈಮರೆತು ಮದ್ಯಪಾನ ಮಾಡಿ ಕುಣಿದು ಕುಪ್ಪಳಿಸುವ ಇಂತಹ ಸಂದರ್ಭದಲ್ಲೂ ಹಿರಿಯ ನಾಗರಿಕರಿಗೆ ಹೊದಿಕೆ ವಿತರಿಸುವ ಮೂಲಕ ಕ್ಯಾಲೆಂಡರ್ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿ ಸಮಾಜಕ್ಕೆ ಸಂದೇಶ ನೀಡಿರುವ ಕೆಎಂಪಿಕೆ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಬಿಜೆಪಿ ನಗರ ಉಪಾಧ್ಯಕ್ಷರಾದ ಹೇಮಾನಂದೀಶ್ ಮಾತನಾಡಿ ಹವಮಾನ ಏರುಪೇರು, ತಂಡಿ ಶೀತಗಾಳಿ ಹೆಚ್ಚಿರುವ ಹಿನ್ನಲೆಯಲ್ಲಿ ಅಶಕ್ತರು, ನಿರಾಶ್ರಿತರಿಗೆ ಹಾಗೂ ಹಿರಿಯ ನಾಗರಿಕರಿಗೆ ನೆರವಾಗಲು ಹೊದಿಕೆ ನೀಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರ ಮಟ್ಟದಲ್ಲಿ ವೃದ್ದಾಶ್ರಮಗಳಿಗೆ ಸರ್ಕಾರಗಳು ತೆರಿಗೆ ವಿನಾಯಿತಿ, ಉಚಿತ ವಿದ್ಯುತ್, ನೀರು ಪೊರೈಕೆ ಸಹಾಯಧನ ಸೌಲಭ್ಯ ನೀಡಲು ಮುಂದಾಗಬೇಕು‌ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್,
ಆಲನಹಳ್ಳಿ ಎಂ ಎನ್ ಚೇತನ್ ಗೌಡ, ನಂದೀಶ್, ಅರಸು, ನಿಲಯ ಪಾಲಕ ಬಸವಣ್ಣ ಮತ್ತಿತರರು ಹಾಜರಿದ್ದರು.