ರೈತ ಸಂಕುಲ ಒಗ್ಗಟ್ಟಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ : ಯದುವೀರ್

Spread the love

ಮೈಸೂರು: ರೈತ ಸಂಕುಲ ಒಗ್ಗಟ್ಟಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ರೈತರು ಮತ್ತು ಸಂಘಟನೆಗಳು ತಮ್ಮ ವೈಯುಕ್ತಿಕ ವಿಚಾರಗಳನ್ನು ವೇದಿಕೆಯೊಳಗೆ ಚರ್ಚಿಸಿ,ದೇಶದ ಮುಂದೆ ಒಗ್ಗಟ್ಟು ಪ್ರದರ್ಶಿಸಿ ಒಂದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ದೇಶ ಮತ್ತು ರೈತ ಸಂಕುಲದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ನಗರದ ಪುರಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತಸಂಘಟನೆಗಳ ಮಹಾ ಒಕ್ಕೂಟದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ನೇತೃತ್ವದಲ್ಲಿ ಏರ್ಪಡಿಸಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಯದುವೀರ್ ಮಾತನಾಡಿದರು.

ದೇಶದ ರೈತರ ಒಳಿತಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಪ್ರಮುಖವಾಗಿ ವಿಕಸಿತ ಭಾರತ ಪರಿಕಲ್ಪನೆ ಅಡಿಯಲ್ಲಿ ರೈತರ ಸಬಲೀಕರಣಕ್ಕೆ ಮುಂದಾಗಿ ಬಲಿಷ್ಠ ಭಾರತ ನಿರ್ಮಾಣ ಮಾಡುವ ಕನಸು ಹೊಂದಿದ್ದಾರೆ ಎಂದು ಹೇಳಿದರು.

ಅದರಂತೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು, ಮಣ್ಣಿನ ಫಲವತ್ತತೆ ಕಾಪಾಡುವ ಗೊಬ್ಬರ, ಮಣ್ಣಿನ ಪರೀಕ್ಷೆ, ಹನಿ ನಿರಾವರಿ ಯೋಜನೆಗಳನ್ನು ರೂಪಿಸಿರುವುದಲ್ಲದೇ, ದೇಶಾದ್ಯಂತ ಅನೇಕ ಕೃಷಿ ಅಧ್ಯಯನ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಎಂದು ತಿಳಿಸಿದರು.

ಅನೇಕ ಕಡೆ ಶುಂಠಿ ಬೆಳೆಗೆ ವಿಪರೀತ ರಾಸಾಯನಿಕ ಗೊಬ್ಬರಗಳನ್ನು ಬಳಸಿರುವ ಕಾರಣ ಮಣ್ಣಿನ ಫಲವತ್ತತೆ ನಶಿಸಿದೆ. ಇದಕ್ಕೆ ಮತ್ತೇ ಜೀವ ಕೊಡುವ ಅವಶ್ಯಕತೆ ಇದ್ದು, ಬೇವಿನ ಹಿಂಡಿಯನ್ನು ಗೊಬ್ಬರವಾಗಿ ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕೆಂದು ಸಲಹೆ ನೀಡಿದರು.

ದೇಶದಲ್ಲಿ ಕೃಷಿ ಕ್ಷೇತದಲ್ಲಿ ಕ್ರಾಂತಿ ಮೂಡಿಸಿದ ಮಾಜಿ ಪ್ರಧಾನಿ ದಿ.ಚೌದರಿ ಚರಣ್ ಸಿಂಗ್ ಸ್ಮರಣಾರ್ಥ ವಿಶ್ವ ರೈತದಿನಾಚರಣೆ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಾಯಕರು ಕೃಷಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ವಿಶ್ವ ರೈತದಿನಾಚರಣೆ ನಡೆಯುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ಯದುವೀರ್ ತಿಳಿಸಿದರು

ರೈತ ಸುಖವಾಗಿದ್ದರೆ ಮಾತ್ರ ದೇಶ ಸುಖವಾಗಿರುತ್ತದೆ. ಈ ನಿಟ್ಟಿನಲ್ಲಿ ರೈತಬಣದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಅವರು ತಮ್ಮ ಪ್ರಾಮಾಣಿಕ ಪ್ರಯತ್ನಗಳ ಮೂಲಕ ರೈತರನ್ನು ಸಂಘಟಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ,ಇಂತಹ ನಾಯಕತ್ವ ರೈತರಿಗೆ ಬೇಕಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷರಾದ ಬೀರಪ್ಪ ದೇಶನೂರು ಮಾತನಾಡಿದರು.

ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಮಾತನಾಡಿ, ವಿಶ್ವ ರೈತ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕಾರಣಿಗಳಿಗೆ ಆಹ್ವಾನ ನೀಡಲಾಗಿತ್ತು ಆದರೇ, ಯಾರೂ ಬಂದಿಲ್ಲ. ರೈತರ ಸಮಸ್ಯೆ ಈಡೇರಿಸಿಲ್ಲ.ಒಂದು ವೇಳೆ ಕಾರ್ಯಕ್ರಮಕ್ಕೆ ಬಂದರೆ ರೈತರಿಗೆ ಉತ್ತರಿಸಬೇಕಾಗುತ್ತದೆ ಎಂಬ ಭಯದಿಂದ ರಾಜಕಾರಣಿಗಳು ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಟೀಕಿಸಿದರು.

ರೈತರನ್ನು ದೇಶದ ಬೆನ್ನೆಲುಬು ಎಂದು ರಾಜಕಾರಣಿಗಳು ಕೇವಲ ವೇದಿಕೆಗಳಲ್ಲಿ ಹೇಳುತ್ತಾರೆ. ಆದರೇ, ದೇಶಕ್ಕೆ ಅನ್ನ ನೀಡುವ ರೈತರನ್ನು ಸದಾ ಕಾಲ ನೆನೆಯಲು ವಿಶ್ವ ರೈತ ದಿನಾಚರಣೆಯನ್ನು ಸರ್ಕಾರವೇ ಆಚರಿಸಲಿ ಎಂದು ಒತ್ತಾಯಿಸಿದರು.

ರೈತ ಮುಖಂಡರಾದ, ಗಣೇಶ ಇಳಿಗೆರ, ಎನ್.ಎಂ.ಸಿದ್ದೇಶ್ ಉತ್ತಂಗಿ, ಮಲ್ಲೀಕ್ ಆವರ್ತಿ, ರವಿಕುಮಾರ್, ಬಸವನಗೌಡ ಪಾಟೀಲ್, ಬಿಡದಿ ಮಹೇಶ್, ರಾಮನಗರ ವಿನೂತಾಗೌಡ, ಈಶ್ವರ್‌ಗೌಡ, ನಾಗರಾಜ್ ಹೂಗಾರ್, ಕಂಠಿ, ಮಂಜು ಪಾಳ್ಯ, ಮಹಬೂಬ್ ಸಾಬ್, ಜವರನಾಯಕ, ಮಂಜುನಾಥ್, ಮಂಜುನಾಥ್ ಜಯಪುರ, ಭೈರೇಗೌಡ, ಹನುಮಂತಪ್ಪ ನಾಯಕ, ಕೃಷ್ಣೇಗೌಡ, ಈರಣ್ಣ ಅಂಗಡಿ, ವೆಂಕಟೇಶ್, ರಾಮೇಗೌಡ, ನಾಗರತ್ನ, ಮಂಗಳ, ಸುಜಾತಾ ಜಾಧವ್, ಜಯಶೀಲ, ರೇಖಾ, ನಾಗವೇಣಿ, ಜ್ಯೋತಿ, ಶೃತಿ, ಶಿವರಾಜು, ದ್ರಾಕ್ಷಿ ಶಿವರಾಮು, ಕೆಂಪರಾಜು, ದಯಾನಂದ ಮುಂತಾದವರು
ಪಾಲ್ಗೊಂಡಿದ್ದರು.

.