ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಸಾರ್ವತ್ರಿಕ ಆರೋಗ್ಯ ಅಂದೋಲನ – ಕರ್ನಾಟಕ ದ ಹಕ್ಕೊತ್ತಾಯಗಳನ್ನು ಪ್ರಸ್ತಾಪಿಸಬೇಕೆಂದು ಮೈಸೂರಿನ ಕೆ ಆರ್ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರಿಗೆ ಎಸ್ ಎ ಎ ಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಎಸ್‌ಎ-ಕೆ ಗಾರ್ಮೆಂಟ್ಸ್ ವರ್ಕಸ್ ಯೂನಿಯನ್, ಬೀಡಿ ಕಾರ್ಮಿಕರ ಯೂನಿಯನ್, ಆಶಾ ಯೂನಿಯನ್, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆಗಳು, ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ, ತ್ಯಾಜ್ಯ ಆಯುವವರು, ವೃದ್ಧರು, ಪೌರಕಾರ್ಮಿಕರು, ದಲಿತ ಸಂಘಟನೆಗಳು, ಬುಡಕಟ್ಟು ಸಮುದಾಯಗಳು, ಲೈಂಗಿಕ ಕಾರ್ಮಿಕರ ಸಂಘಟನೆಗಳು, ಆರೋಗ್ಯ ಸಂಪನ್ಮೂಲ ಸಂಸ್ಥೆಗಳು ಮತ್ತಿತರ 30 ವಿವಿಧ ಸಂಸ್ಥೆಗಳು ಈ ಚಳಿಗಾಲದ ಅಧಿವೇಶನದಲ್ಲಿ ಹಕ್ಕೊತ್ತಾಯಗಳನ್ನು ಮಂಡಿಸುತ್ತಿದ್ದು ಈ ಬಗ್ಗೆ ಧ್ವನಿ ಎತ್ತಬೇಕೆಂದು,ತಮ್ಮ ಪರವಾಗಿ ನಿಲ್ಲಬೇಕೆಂದು ಪದಾಧಿಕಾರಿಗಳು ಶ್ರೀ ವತ್ಸ ಅವರಲ್ಲಿ ಕೋರಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಲಭ್ಯತೆ ಕೊರತೆ ಆಗದಂತೆ ನೋಡಿಕೊಳ್ಳಬೇಕು, ಸರ್ಕಾರಿ ವೈದ್ಯರು ಯಾವುದೇ ರೋಗಿಗೆ ಹೊರಗಿನ ಔಷಧಾಲಯ ದಿಂದ ಔಷಧಿ ಖರೀದಿಸಲು ಚೀಟಿ ಕೊಡಬಾರದು, ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಔಷಧಿಗಳ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಎಂಎಸ್ಸಿಎಲ್) ವನ್ನು ಬಲಪಡಿಸಬೇಕು, ಬಳಕೆದಾರ ಶುಲ್ಕವನ್ನು ರದ್ದುಗೊಳಿಸಬೇಕು, ಆರೋಗ್ಯ ವ್ಯವಸ್ಥೆಯ ಖಾಸಗೀಕರಣವನ್ನು ನಿಲ್ಲಿಸಬೇಕು, ಆರೋಗ್ಯ ಕೇಂದ್ರಗಳ ತೆರೆದಿರುವ ಸಮಯ ಸರಿಯಾಗಿಲ್ಲ ಆದ್ದರಿಂದ ರಾಜ್ಯಾದ್ಯಂತ ಪ್ರಾಥಮಿಕ
ಆರೋಗ್ಯ ಕೇಂದ್ರವನ್ನು ಸಂಜೆ ಸಮಯದಲ್ಲಿ ಅಂದರೆ ಸಂಜೆ 5 ರಿಂದ ರಾತ್ರಿ 8 ರವರೆಗೆ ತೆರೆದಿರುವಂತೆ ಕ್ರಮ ಕೈಗೊಳ್ಳಬೇಕು ಎಂಬುದೂ ಸೇರಿದಂತೆ ತಕ್ಷಣವೇ ಕರ್ನಾಟಕದಲ್ಲಿ ಆರೋಗ್ಯ ಹಕ್ಕು ಕಾಯಿದೆಯನ್ನು ತರಬೇಕೆಂದು ಸಾರ್ವತ್ರಿಕ ಆರೋಗ್ಯ ಅಂದೋಲನ – ಕರ್ನಾಟಕ ದ ಸದಸ್ಯರು ಸರ್ಕಾರ ವನ್ನು ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಶ್ರೀವತ್ಸ ಅವರಿಗೆ ಎಸ್ ಎ ಎ ಕೆ ಪರವಾಗಿ ಗೋಪಾಲ್ ದಾಬಡೆ,
ತಾನಾಜಿ ಸಾವಂತ್ ನೇತೃತ್ವದಲ್ಲಿ ಪುಷ್ಪ ವಿ.ಪಿ,ಅಕ್ಷಯ್ ಎಸ್ ದಿನೇಶ್,ಸ್ವಾತಿ ಎಸ್.ಬಿ.,ಶಾಯರಿ ನಾಗ್,ಮೆನಾರ ಎಂ.ಬಿ,
ಗೀತಾ ಮತ್ತಿತರರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೈಸೂರು ನಗರದ ಬಿಜೆಪಿ ಉಪಾಧ್ಯಕ್ಷರಾದ ಜೋಗಿ ಮಂಜು, ಕೆಆರ್ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ನಿಶಾಂತ್ ಮತ್ತಿತರರು ಹಾಜರಿದ್ದರು.
