ಡಿ.15 ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ನೂತನ ಪಟ್ಟಾಧಿಕಾರ ಮಹೋತ್ಸವ

ಮೈಸೂರು: ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ನೂತನ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ಡಿ.15ರಂದು ನಡೆಯಲಿದೆ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಪದಾಧಿಕಾರಿಗಳು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಮೈಸೂರು ಜಿಲ್ಲಾ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ,ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಜಗದ್ಗುರು ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿಗಳು ತಮ್ಮ ಉತ್ತರಾಧಿಕಾರಿಯನ್ನಾಗಿ ಮಂಡ್ಯದ ಅಡಿಷನಲ್ ಸ್ಪೆಷಲ್ ಡಿಸಿಯಾಗಿದ್ದ ಡಾ. ಹೆಚ್ ಎಲ್ ನಾಗರಾಜ್ ಅವರಿಗೆ ಇದೇ ತಿಂಗಳ 14 ಹಾಗೂ 15ರಂದು ಬೆಂಗಳೂರಿನ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದಲ್ಲಿ ಪಟ್ಟಾಧಿಕಾರ ಮಹೋತ್ಸವವನ್ನು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಈ ಪಟ್ಟಾಭಿಷೇಕಕ್ಕೆ ಎಲ್ಲಾ ಸಮುದಾಯಗಳ ಮಠಾಧಿಪತಿಗಳು ಆಗಮಿಸುತ್ತಿದ್ದಾರೆ, ಜೊತೆಗೆ ನಮ್ಮ ಸಮುದಾಯದ ಪೂಜ್ಯ ಗುರುಗಳಾದ ಡಾ ‌ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ ಎಂದು ಹೇಳಿದರು.

ಈ ಪಟ್ಟಾಭಿಷೇಕ ಶುಭ ಸಂದರ್ಭದಲ್ಲಿ ಮಣ್ಣಿನ ಮಗ, ಸಮುದಾಯದ ಅಸ್ಮಿತೆ ಮಾಜಿ ಪ್ರಧಾನಿಗಳಾದ ಎಚ್. ಡಿ ದೇವೇಗೌಡರು ಉಪಸ್ಥಿತರಿರುತ್ತಾರೆ.

ಈ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಉತ್ತರಾಧಿಕಾರಿಗಳಾಗಿ ನಿಯೋಜಿತವಾಗಿರುವ ಡಾಕ್ಟರ್ ಎಚ್ ಎಲ್ ನಾಗರಾಜ ಅವರಿಗೆ ಪಟ್ಟಾಧಿಕಾರವನ್ನು ನೆರವೇರಿಸಿ ಜಗದ್ಗುರು ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು ಎಂದು ನೂತನ ನಾಮಕರಣ ಮಾಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠ, ಮೈಸೂರು ರಸ್ತೆ ಕೆಂಗೇರಿಯಲ್ಲಿ ನಡೆಯಲಿರುವ ಈ ಪಟ್ಟಾಧಿಕಾರ ಮಹೋತ್ಸವಕ್ಕೆ ಮೈಸೂರು ಜಿಲ್ಲೆಯ ಎಲ್ಲಾ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತೇಜೇಶ್ ಲೋಕೇಶ್ ಗೌಡ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಮಕೃಷ್ಣೇಗೌಡ, ವರಕೂಡು ಕೃಷ್ಣೇಗೌಡ, ಕೃಷ್ಣಪ್ಪ, ಪ್ರಭಾಕರ್ ಹಾಗೂ ಕುಮಾರ್ ಉಪಸ್ಥಿತರಿದ್ದರು.