ಮೈಸೂರು: ಅಕ್ರಮ ಸಂಬಂಧ ವಿರೋಧಿಸಿ ಪ್ರಶ್ನಿಸಿದ ಪತ್ನಿ ಮತ್ತು ಮಗಳ ಮೇಲೆ ಪ್ರಿಯತಮೆ ಜೊತೆ ಸೇರಿ ಪಾಪಿ ಪತಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹೇಯ ಘಟನೆ ನಡೆದಿದ್ದು,ಬೆಂಗಳೂರಿನ ಶ್ವೇತಾ ಎಂಬುವರು ತಮ್ಮ ಪತಿ ಸಂತೋಷ್ ಕುಮಾರ್ ಹಾಗೂ ಆತನ ಪ್ರಿಯತಮೆ ಶಿಲ್ಪಾ ವಿರುದ್ದ ಎನ್.ಆರ್.ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಕೆಂಗೇರಿ ಸಮೀಪದ ಲಿಂಗಧೀರನಹಳ್ಳಿ ನಿವಾಸಿಗಳಾದ ಶ್ವೇತಾ ಹಾಗೂ ಸಂತೋಷ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ,ಇಬ್ಬರು ಅನ್ಯೋನ್ಯವಾಗಿದ್ದರು.ಅಷ್ಟರಲ್ಲಿ ಸಂತೋಷ್ ಗೆ ಶಿಲ್ಪಾ ಪರಿಚಯವಾಗಿ ಸ್ನೇಹವಾಗಿದೆ.
ಸುಮಾರು 6 ತಿಂಗಳ ಹಿಂದೆ ಸಂತೋಷ್ ಕುಮಾರ್ ಜೀವನಕ್ಕೆ ಶಿಲ್ಪಾ ಎಂಟ್ರಿಕೊಟ್ಟಿದ್ದರಿಂದ ಇವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಆಗಾಗ ಮೊಬೈಲ್ ನಲ್ಲಿ ಸಂತೋಷ್ ಕುಮಾರ್ ಜೊತೆ ಮಾತನಾಡುವುದು, ಅಶ್ಲೀಲ ಮೆಸೇಜ್ ಗಳನ್ನ ಹಾಕುವುದು ಹೀಗೆ ಶಿಲ್ಪಾ ಕ್ರಮೇಣ ದಂಪತಿಯ ಜೀವನಕ್ಕೆ ಮುಳ್ಳಾಗಿದ್ದಾಳೆ.
ಶಿಲ್ಪಾ ಹೇಳಿದಂತೆ ಕೇಳತೊಡಗಿದ ಸಂತೋಷ್ ಕುಮಾರ್ ಆಗಾಗ ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿ ರಂಪಾಟ ಮಾಡುತ್ತಿದ್ದ.ಈ ಬಗ್ಗೆ ಈ ಹಿಂದೆ ಶ್ವೇತಾ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ದ ದೂರು ದಾಖಲಿಸಿದ್ದರು.ಈ ಬೆಳವಣಿಗೆ ಇಬ್ಬರು ಮಕ್ಕಳ ಮೇಲೆ ಪರಿಣಾಮ ಬೀರಿತು.
ಕಿರಿ ಮಗಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಮೈಸೂರಿನ ತಾಯಿ ಮನೆಯಲ್ಲಿ ಉಳಿದುಕೊಂಡಿದ್ದಳು.ಮಗಳನ್ನ ನೋಡಲು ಶ್ವೇತಾ ತನ್ನ ಹಿರಿ ಮಗಳ ಜೊತೆ ಮೈಸೂರಿಗೆ ಬಂದಾಗ ಬನ್ನಿಮಂಟಪದ ಎಲ್.ಐ.ಸಿ.ಸರ್ಕಲ್ ಬಳಿ ಸಂತೋಷ್ ಕುಮಾರ್ ಹಾಗೂ ಪ್ರಿಯತಮೆ ಶಿಲ್ಪಾ ಎದುರಾಗಿ ಶ್ವೇತಾ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ.
ಹಲ್ಲೆಗೊಳಗಾದ ಶ್ವೇತಾ ಘಟನೆಯಿಂದ ಚೇತರಿಸಿಕೊಂಡ ನಂತರ ಎನ್.ಆರ್.ಠಾಣೆಯಲ್ಲಿ ಪತಿ ಹಾಗೂ ಆತನ ಪ್ರಿಯತಮೆ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.