ಮೈಸೂರು: ಹೋಟೆಲ್ ಬಿಲ್ ಪಾವತಿ ಮಾಡಿಲ್ಲವೆಂದು ಆರೋಪಿಸಿ ಮಾಲೀಕರು ಸೇರಿದಂತೆ ಮೂವರು ವ್ಯಕ್ತಿಗಳು ಮಹಿಳೆಯೊಬ್ಬರ ಮೇಲೆ ನಡುರಸ್ತೆಯಲ್ಲೇ ಹಲ್ಲೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚವಟಿ ವೃತ್ತದ ಬಳಿ ಈ ಘಟನೆ ನಡೆದಿದೆ.
ಮೈಸೂರು ಕಿಚನ್ ಹೋಟೆಲ್ ಮಾಲೀಕರಾದ ಸವಿತಾ ಸೇರಿದಂತೆ ಮೂವರ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೂ ಮಾರಾಟ ಮಾಡುವ ಶೋಭಾ ರವರು ಮೈಸೂರು ಕಿಚನ್ ಹೋಟೆಲ್ ನಲ್ಲಿ ಖಾರಾಬಾತ್ ಹಾಗೂ ರೈಸ್ ಭಾತ್ ಖರೀದಿಸಿದ್ದಾರೆ.170 ರೂ ಬಿಲ್ ಪಾವತಿಸಿದ್ದಾರೆ.
ಆದರೆ 10 ದಿನಗಳ ನಂತರ ಮಾಲೀಕರಾದ ಸವಿತಾ ಇಬ್ಬರು ವ್ಯಕ್ತಿಗಳನ್ನ ಕಾರಿನಲ್ಲಿ ಕರೆತಂದು ಪಂಚವಟಿ ವೃತ್ತದ ಬಳಿ ಹೋಗುತ್ತಿದ್ದ ಶೋಭಾ ಅವರನ್ನ ಅಡ್ಡಗಟ್ಟಿ ಬಿಲ್ ಪಾವತಿಸಿಲ್ಲವೆಂದು ಆರೋಪಿಸಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕವಾಗಿ ಅಪಮಾನ ಮಾಡಿದ್ದಾರೆ.
ಇದರಿಂದ ತಮ್ಮ ಕಿವಿ ತಮಟೆ ಒಡೆದುಹೋಗಿದೆ ಎಂದು ಆರೋಪಿಸಿರುವ ಶೋಭಾ ಸವಿತಾ ಹಾಗೂ ಇಬ್ಬರು ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.