ಬೆಂಗಳೂರು: ಬೆಳ್ಳಂಬೆಳಗ್ಗೆ
ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ.
ನಾಲ್ವರು ಅಧಿಕಾರಿಗಳಿಗೆ ಸೇರಿದ 25 ಸ್ಥಳಗಳಲ್ಲಿ ಏಕಾಏಕಿ ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ.
ಬೆಂಗಳೂರು, ಮಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಂಗಳೂರು ನಗರ ಯೋಜನಾ ಘಟಕದ ನಿರ್ದೇಶಕ ತಿಪ್ಪೇಸ್ವಾಮಿ ನಿವಾಸ ಹಾಗೂ ಕಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ ತಿಪ್ಪೇಸ್ವಾಮಿ ಪತ್ನಿಯ ತವರು ಮನೆಯಾದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದರೆ ಗ್ರಾಮದ ಮನೆಯಲ್ಲಿ
ದಾವಣಗೆರೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಪ್ರಭು ನೇತ್ರತ್ವದಲ್ಲಿ ಶೋಧ ನಡೆಯುತ್ತಿದೆ.
ತಿಪ್ಪೇಸ್ವಾಮಿಯವರ ಗಿರಿನಗರದಲ್ಲಿರುವ ಬಂಗಲೆಗೆ ಎಸ್ಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಬಂಗಲೆಯಲ್ಲಿ ಪರಿಶೀಲನೆ ನಡೆಯುತ್ತಿದೆ.
ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ ಪತ್ತೆಯಾದ ಹಿನ್ನೆಲೆಯಲ್ಲಿ ಚಿನ್ನಾಭರಣ ತೂಕ ಹಾಕಲು ಲೋಕಾ ಅಧಿಕಾರಿಗಳು ತಿಪ್ಪೇಸ್ವಾಮಿ ಮನೆಗೆ ಅಕ್ಕಸಾಲಿಗನನ್ನು ಕರೆಸಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆ ದೂರು ಬಂದ ಹಿನ್ನೆಲೆ ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ಅವರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೈಸೂರು, ಬೆಂಗಳೂರು, ಮಂಡ್ಯದ ಮಳವಳ್ಳಿಯಲ್ಲಿರುವ ಮಹೇಶ್ ಅವರಿಗೆ ಸೇರಿದ ಮನೆಗಳು ಹಾಗೂ ಸಂಬಂಧಿಕರ ಮನೆಗಳ ಮೇಲೂ ಕಾರ್ಯಾಚರಣೆ ನಡೆಸಿದ್ದಾರೆ.
ಜೊತೆಗೆ ಕೆಆರ್ಎಸ್ನಲ್ಲಿ ಇರುವ ಮಹೇಶ್ ಪತ್ನಿ ಮಾಲೀಕತ್ವದ ಪೆಟ್ರೋಲ್ ಬಂಕ್ ಮೇಲೂ ದಾಳಿ ನಡೆದಿದೆ. ದಾಳಿ ವೇಳೆ ಕೆಲವು ದಾಖಲೆಗಳು, ನಗದು ಹಾಗೂ ಚಿನ್ನಾಭರಣಗಳು ಸಿಕ್ಕಿವೆ ಎಂದು ಗೊತ್ತಾಗಿದೆ.