ವಸ್ತುಗಳ ಅಪಾಯಕಾರಿ ಸಾಗಾಟ ನಿಲ್ಲಲಿ- ಗಗನ್ ದೀಪ್

Spread the love

ಮೈಸೂರು: ಮೈಸೂರು ನಗರ ಮತ್ತು ಹೊರವಲಯದಲ್ಲಿ ಅನೇಕ ಕಡೆ ತೆರೆದ ವಾಹನಗಳಲ್ಲಿ ಕಬ್ಬಿಣದ ಸರಳು ಮತ್ತಿತರ ವಸ್ತುಗಳನ್ನು ಸಾಗಿಸುತ್ತಾರೆ ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ ಎಂದು ಸಮಾಜ ಸೇವಕ ಗಗನ್ ದೀಪ್ ಎಚ್ಚರಿಸಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಕಂಬಿ, ಕಬ್ಬಿಣದ ದೊಡ್ಡ ದೊಡ್ಡ ಸಾಮಗ್ರಿಗಳನ್ನು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ತೆಗೆದುಕೊಂಡು ಹೋಗಲಾಗುತ್ತದೆ.

ಇಂತಹ ಕಂಬಿಗಳು ವಾಹನಗಳಿಂದ ಹೊರಗೆ ಚಾಚಿಕೊಂಡಿರುತ್ತವೆ. ಕೆಲ ವಾಹನಗಳಲ್ಲಿ ಅಪಾಯದ ಸೂಚಕವಾಗಿ ಅದಕ್ಕೊಂದು ಕೆಂಪು ಬಟ್ಟೆ ಕಟ್ಟುವ ಗೋಜಿಗೂ ಹೋಗುವುದಿಲ್ಲ.

ಇದೇ ರೀತಿ ಕಬ್ಬಿಣದ ಸರಳುಗಳನ್ನು ಸಾಗಿಸುತ್ತಿದ್ದ ವಾಹನ ಆಕಸ್ಮಿಕವಾಗಿ ಹಿಂದಿನಿಂದ ಬರುತ್ತಿದ್ದ ವಾಹನ ಡಿಕ್ಕಿಹೊಡೆದು ಕಬ್ಬಿಣ ಚಾಲಕನಿಗೆ ಚುಚ್ಚಿ ಆತ ದುರ್ಮರಣ ಅಪ್ಪಿದ ಉದಾಹರಣೆ ನಮ್ಮ ರಾಜ್ಯದಲ್ಲೇ ಇದೆ.ಹಾಗಾಗಿ ಈ ಬಗ್ಗೆ ಜರೂರಾಗಿ ಕ್ರಮ ತೆಗೆದುಕೊಳ್ಳುವ ಅತ್ಯಗತ್ಯವಿದೆ.

ಅನೇಕ ವೃತ್ತಗಳಲ್ಲಿ ಪೊಲೀಸರ ಎದುರಲ್ಲೇ ಇಂಥ ವಾಹನಗಳು ಸಾಗುತ್ತವೆ. ಆದರೆ ಅವರು ಯಾವ ಕ್ರಮಕ್ಕೂ ಮುಂದಾಗುವುದಿಲ್ಲ,ಕನಿಷ್ಠ ಎಚ್ಚರಿಕೆ ನೀಡುವ ಗೋಜಿಗೂ ಹೋಗುವುದಿಲ್ಲ.

ಕಲ್ಲು-ಮಣ್ಣು ಕೂಡ ತೆರೆದ ವಾಹನಗಳಲ್ಲಿ ಸಾಗಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇಂತಹ ವಾಹನಗಳ ಹಿಂದೆ ಅಥವಾ ಬದಿಯಲ್ಲಿ ಹೋಗುವ ಇತರ
ವಾಹನಗಳ ಸವಾರರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಆದ್ದರಿಂದ ಆದಷ್ಟು ಬೇಗ ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಗಗನ್ ದೀಪ್ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.