ಕೀರ್ತನೆಗಳ ಮೂಲಕ ಸಮಾಜದ ಮೌಢ್ಯ ತೆಗೆಯಲು ಶ್ರಮಿಸಿದ ಕನಕದಾಸರು- ಹರೀಶ್ ಗೌಡ

Spread the love

ಮೈಸೂರು: ದಾಸಶ್ರೇಷ್ಠ ಸಂತಕವಿ ಶ್ರೀ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಕಂದಾಚಾರ, ಮೌಢ್ಯವನ್ನು ಹೋಗಲಾಡಿಸಲು ಶ್ರಮಿಸಿದ್ದರು ಎಂದು
ಶಾಸಕ ಕೆ. ಹರೀಶ್ ಗೌಡ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತ ಶ್ರೀ ಕನಕದಾಸರ ಜಯಂತೋತ್ಸವ ಸಮಿತಿ(ರಿ) ಮೈಸೂರು ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ, ದಾಸಶ್ರೇಷ್ಠ ಸಂತ ಕವಿ ಶ್ರೀ ಕನಕದಾಸರ 537 ನೇ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಕನಕರ ಕೀರ್ತನೆಗಳು ಇಡೀ ದೇಶಕ್ಕೆ ಮಾದರಿ ಎಂದು ಬಣ್ಣಿಸಿದರು.

ಕುಲ-ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲವನ್ನೇನಾದರೂ ಬಲ್ಲಿರಾ ಎಂಬ ಕನಕರ ಕೀರ್ತನೆ ಇಂದಿಗೂ ಪ್ರಸ್ತುತವಾದುದು,ಅವರ ಕೀರ್ತನೆಯಲ್ಲಿರುವ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿದ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು ಎಂದು ಹರೀಶ್ ಗೌಡ ಕರೆ ನೀಡಿದರು.

ಕನಕದಾಸರ ಹಾದಿಯಲ್ಲಿಯೇ ಇಂದು ಸರ್ಕಾರವು ಯಾವುದೇ ಜಾತಿ-ಧರ್ಮವನ್ನು ನೋಡದೆ, ರಾಜ್ಯದಲ್ಲಿರುವ ಪ್ರತಿಯೊಬ್ಬರಿಗೂ ಸೌಕರ್ಯವನ್ನು ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಧಕ್ಷತೆ ಹಾಗೂ ಪ್ರಾಮಾಣಿಕವಾಗಿ ಆಡಳಿತ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಂತ ಶ್ರೀ ಕನಕದಾಸ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಎಂ. ಕೆ. ಸೋಮಶೇಖರ್ ಮಾತನಾಡಿ, ಕಳೆದ 40 ವರ್ಷಗಳಿಂದ ಕನಕದಾಸ ಜಯಂತ್ಯೋತ್ಸವ ಸಮಿತಿ ವತಿಯಿಂದ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, 2008 ರಲ್ಲಿ ಸರ್ಕಾರವು ಜಿಲ್ಲಾಡಳಿತದೊಂದಿಗೆ ಆಚರಿಸಲು ಅನುಮತಿ ನೀಡಿತು. ಅಂದಿನಿಂದ ಸರ್ಕಾರದ ವತಿಯಿಂದ ಅಚ್ಚುಕಟ್ಟಾಗಿ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕನಕದಾಸರು ಸಮಾಜದಲ್ಲಿರುವ ಅಂಕು-ಡೊಂಕು, ತಾರತಮ್ಯವನ್ನು ಖಂಡಿಸಿ, ತಮಗಿದ್ದ ವೈಭವವನ್ನು ತ್ಯಜಿಸಿ ಜನರ ಕಷ್ಟಕ್ಕೆ ಸ್ಪಂದಿಸಲು ಮುಂದಾದರು.

ಕುಲ-ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲವನ್ನೇನಾದರೂ ಬಲ್ಲಿರಾ ಎಂಬ ಗೀತೆಯ ಮೂಲಕ ಯಾವುದೇ ಕುಲವಿಲ್ಲ ಎಂದು ಹೇಳಿರುವ ಕನಕದಾಸರು ಇಡೀ ದೇಶಕ್ಕೆ ಮಾದರಿ. ಡಾ. ಬಿ ಆರ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಇಂದು ಜಾತಿ ತಾರತಮ್ಯ ಕಡಿಮೆಯಾಗುತ್ತಿದೆಯಾದರೂ, ಗ್ರಾಮೀಣ ಭಾಗಗಳಲ್ಲಿ ಇನ್ನೂ ನೆಲೆಯೂರಿದೆ. ಈ ಜಾತಿ ಧರ್ಮದ ತಾರತಮ್ಯ ಬುಡಸಮೇತವಾಗಿ ನಿರ್ಮೂಲನೆಯಾಗಬೇಕು ಎಂದು ಸೋಮಶೇಖರ್ ಹೇಳಿದರು.

ಅಂದು ದೇವರಾಜ ಅರಸು ಅವರು ಹಿಂದುಳಿದವರಿಗೆ ಸೌಕರ್ಯ ನೀಡಿದಂತೆ, ಇಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ಪರ ನಿಂತು ಕೆಲಸ ಮಾಡುತ್ತಿದೆ ಎಂದು ಕೊಂಡಾಡಿದರು.

ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ ಅವರು ಮಾತನಾಡಿ,ಸುಮಾರು 316 ಕೀರ್ತನೆಗಳನ್ನು ರಚಿಸಿರುವ ಕನಕದಾಸರು ತಮ್ಮಲ್ಲಿರುವ ಶ್ರದ್ದೆ, ಭಕ್ತಿಯಿಂದ ಶ್ರೀ ಕೃಷ್ಣನ ದರ್ಶನವನ್ನು ಪಡೆದರು. ಇದಕ್ಕೆ ಸಾಕ್ಷಿಯಾಗಿ ಇಂದು ಉಡುಪಿಯಲ್ಲಿರುವ ಕನಕನ ಕಿಂಡಿಯನ್ನು ಕಾಣಬಹುದಾಗಿದೆ. ಇದರಿಂದ ಕನಕದಾಸರ ಸಾಧನೆ, ಶಕ್ತಿಯು ತಿಳಿಯುತ್ತದೆ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಅವರು ಮಾತನಾಡಿ, ಮಹಾನ್ ವ್ಯಕ್ತಿ ಕನಕರ ಕೀರ್ತನೆಗಳನ್ನು ಅರ್ಥ ಮಾಡಿಕೊಳ್ಳಬೇಕು, ಅವರ ಕೀರ್ತನೆಯಲ್ಲಿರುವ ಸತ್ಯಾಂಶವನ್ನು ತಿಳಿದು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು.

ಸಾಹಿತಿ ಪ್ರೊ.ಸಿ. ನಾಗಣ್ಣ ಅವರು ಮಾತನಾಡಿ ಕನಕದಾಸರು ಕಲಿ, ಕವಿ ಹಾಗೂ ಸಂತರು ಮೂರು ರೀತಿಯಲ್ಲಿ ಅವರು ಬದುಕಿ ತ್ರಿರಂಗದಲ್ಲಿ ಕಲಿಯಾಗಿ, ಕವಿಯಾಗಿ, ಸಂತರಾಗಿ ಲೋಕಕ್ಕೆ ಶ್ರೇಷ್ಠ ಮಾದರಿಯನ್ನು ಒದಗಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಶ್ರೀ ಕಾಗಿನೆಲೆ ಕನಕ ಗುರು ಪೀಠದ ಶ್ರೀ ಶಿವಾನಂದ ಪುರಿ ಸ್ವಾಮೀಜಿ ಸಾನುಧ್ಯ ವಹಿಸಿದ್ದರು.

ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ,ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಎಂ. ಗಾಯತ್ರಿ ಸೇರಿದಂತೆ ಸಂತ ಶ್ರೀ ಕನಕದಾಸರ ಜಯಂತ್ಯೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸಂಘ -ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.