ಮೈಸೂರು: ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ಶಾಲೆ ಯೋಜನೆ (ಪ.ಪೂ.ಕಾಲೇಜು) ಯಡಿ ನಿರ್ಮಿಸಿರುವ 4 ಕೊಠಡಿಗಳು ಹಾಗೂ ಶೌಚಾಲಯ ಬ್ಲಾಕ್ ಅನ್ನು ಶಾಸಕ ಕೆ. ಹರೀಶ್ ಗೌಡ ಉದ್ಘಾಟಿಸಿದರು.

4 ಹೊಸ ಕೊಠಡಿಗಳ ಕಟ್ಟಡದ ಬ್ಲಾಕ್ ಹಾಗೂ ಕಾಲೇಜಿನಲ್ಲಿಯೇ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಅಂದಾಜು 7.35 ರೂ ವೆಚ್ಚದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದವರು ಪೂರ್ಣಗೊಳಿಸಿದ್ದಾರೆ.
ಈ ವೇಳೆ ಮಾತನಾಡಿದ ಹರೀಶ್ ಗೌಡ ಅವರು ನನ್ನ ಕ್ಷೇತ್ರದಲ್ಲಿ ಅತಿಹೆಚ್ಚು ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಿದ್ದು, ಹೆಚ್ಚು ದಾಖಲಾತಿ ಆಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಸರ್ಕಾರಿ ಶಾಲಾ ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಡಜನರು ಖಾಸಗಿ ಶಿಕ್ಷಣ ಸಂಸ್ಥೆಗಳ ಮೊರೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು.ಇಂದಿನ ಸ್ಪರ್ಧಾತ್ಮಕ ದಿನದಲ್ಲಿ ಪೈಪೋಟಿ ನೀಡುವ ಸವಾಲು ಅರಿತುಕೊಂಡು ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದು ಹರೀಶ್ ಗೌಡ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ಉಪ ನಿರ್ದೇಶಕ ಮರಿಸ್ವಾಮಿ, ಪ್ರಾಂಶುಪಾಲ ಸೋಮಣ್ಣ, ಕಾಲೇಜು ಅಭಿವೃದ್ಧಿ ಉಪಾಧ್ಯಕ್ಷ ರಾಜೀವ್, ಪಿ.ಆರ್.ಇ.ಡಿ ಕಾರ್ಯಪಾಲಕ ಅಭಿಯಂತರರು, ಅಧ್ಯಾಪಕರು, ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.