ಕನ್ನಡಿಗರನ್ನು ಹೀಯಾಳಿಸುವ ಕೆಲಸ ಮಾಡಿದರೆ ಕಠಿಣ ಕ್ರಮ-ಸಿದ್ದು ಎಚ್ಚರಿಕೆ

Spread the love

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಹೀಯಾಳಿಸುವ ಕೆಲಸ ಆಗುತ್ತಿದೆ, ಇನ್ನು ಮುಂದೆ ಯಾರಾದರೂ ನಿಂದಿಸಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಠಿಣ ಎಚ್ಚರಿಕೆ ನೀಡಿದರು.

ಬೆಂಗಳೂರಿನ ಸ್ಟೇಡಿಯಂನಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರೆಸಿ ಸಿದ್ದು ಮಾತನಾಡಿದರು.

ಎಲ್ಲರಲ್ಲಿಯೂ ಕನ್ನಡ ಅಭಿಮಾನ ಇರಲಿ, ದುರಭಿಮಾನ ಬೇಡ,ಅಭಿಮಾನವಿದ್ದರೆ ಮಾತ್ರ ಕನ್ನಡ ಬೆಳೆಯುತ್ತದೆ. ಕನ್ನಡ ಬಾರದವರ ಜೊತೆಯಲ್ಲಿಯೂ ಕನ್ನಡದಲ್ಲಿಯೇ ಮಾತನಾಡಿ,ಅವರಿಗು ಕನ್ನಡ ಕಲಿಸಬೇಕು, ಆಗ ಕನ್ನಡದ ವಾತಾವರಣ ನಿರ್ಮಾಣವಾಗುತ್ತದೆ ಎಲ್ಲರೂ ಈ ಪ್ರತಿಜ್ಞೆಯನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ, ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ, ಅಂತಹವರ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ತಗೊಳ್ಳುತ್ತದೆ. ನಾವು ಕನ್ನಡಿಗರಾಗಿರುತ್ತೇವೆ. ಬೇರೆಯವರನ್ನೂ ಕನ್ನಡಿಗರಾಗಿ ಮಾಡುತ್ತೇವೆ ವ್ಯವಹಾರದಲ್ಲೂ ಕನ್ನಡ ಬಳಸುತ್ತೇವೆ ಎಂದು ಶಪಥ ಮಾಡೋಣ ಎಂದು ತಿಳಿಸಿದರು.

ಕನ್ನಡದ ಅಭಿಮಾನವಿರಲಿ ಬೇರೆ ಭಾಷಿಕರಿಗೂ ಕನ್ನಡ ಕಲಿಸುವ ಕೆಲಸ ಮಾಡಬೇಕು. ಯಾವುದೇ ಧರ್ಮ, ಭಾಷೆ, ಪ್ರಾಂತ್ಯದವರು ಇರಲಿ ಕರ್ನಾಟಕದಲ್ಲಿ ಇರುವವರೆಲ್ಲ ಕನ್ನಡಿಗರೇ.ನಮ್ಮ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕನ್ನಡ ಶಾಸ್ತ್ರೀಯ ಭಾಷೆ. ನಾವು ನಮ್ಮ ಭಾಷೆಯನ್ನು ಯಾವುದೇ ಕಾರಣಕ್ಕೂ ಬಲಿ ಕೊಟ್ಟು ಉದಾರಿಗಳಾಗಬಾರದು. ಭಾಷೆ ವ್ಯಾಮೋಹವೂ ಅತಿಯಾಗಿರಬಾರದು, ಆದರೆ ಕನ್ನಡ ಅಭಿಮಾನ ಬಿಟ್ಟುಕೊಡಬಾರದು. ಬೇರೆ ಭಾಷೆ ಕಲಿಯಿರಿ, ಆದರೆ ಕನ್ನಡ ಮರೆಯಬೇಡಿ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯಗಳ ಏಕೀಕರಣ ಆಗಿ 68 ವರ್ಷಗಳು ತುಂಬಿದ್ದು 69ಕ್ಕೆ ಕಾಲಿಟ್ಟಿದ್ದೀವಿ. 1953ರಲ್ಲಿ ಫಜಲ್ ಅಲಿ ನೇತೃತ್ವದಲ್ಲಿ ರಾಜ್ಯಗಳ ಪುನರ್ವಿಂಗಡಣೆ ಸಮಿತಿ ರಚಿಸಲಾಯಿತು. ಇವರು ಕೊಟ್ಟ ವರದಿ ಆಧಾರದಲ್ಲಿ ಭಾಷಾವಾರು ರಾಜ್ಯಗಳ ವಿಂಗಡಣೆ ಆಯಿತು. ಆ ದಿನವನ್ನು ನಾವೆಲ್ಲರೂ ಇಡೀ ದೇಶದಲ್ಲಿ ರಾಜ್ಯಗಳ ಏಕೀಕರಣ ದಿನವಾಗಿ ಆಚರಿಸುತ್ತಿದ್ದೇವೆ. 1973ರವರೆಗೆ ಕರ್ನಾಟಕ ರಾಜ್ಯ ಆಗಿರಲಿಲ್ಲ, ಮೈಸೂರು ರಾಜ್ಯ ಆಗಿತ್ತು. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು 1973 ನವೆಂಬರ್ 1 ರಂದು ಹೆಸರು ಇಡಲಾಯಿತು. ನಾಮಕರಣ ಆಗಿ 51 ವರ್ಷ ತುಂಬುತ್ತಿದೆ. 50 ವರ್ಷವಾದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಆದರೆ ಅವರು 50ನೇ ವರ್ಷದ ಆಚರಣೆ ಮಾಡಲಿಲ್ಲ. ನಾವು ಬಂದ ಮೇಲೆ ಇಡೀ ವರ್ಷ ಸಂಭ್ರಮದಿಂದ ಆಚರಣೆ ಮಾಡಿದೆವು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್, ಶಿಕ್ಷಣ ಸಚಿವ ಮಧುಬಂಗಾರಪ್ಪ ಮತ್ತಿತರರು ಪಾಲ್ಗೊಂಡಿದ್ದರು.