ಮನಿಲಾ: ಫಿಲಿಪೈನ್ಸ್ನ ದಕ್ಷಿಣ ಭಾಗದಲ್ಲಿ ಸೋಮವಾರ ಸಂಭವಿಸಿದ ಪ್ರಬಲ 7.8 ತೀವ್ರತೆಯ ಭೂಕಂಪದಿಂದ 32 ಮಂದಿ ಮೃತಪಟ್ಟಿದ್ದು,200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಭೂಕಂಪದ ಪರಿಣಾಮ ಹಲವಾರು ಕಟ್ಟಡಗಳು ಕುಸಿದು ಬಿದ್ದಿದ್ದು, ಫಿಲಿಪೈನ್ಸ್ ಸೇರಿದಂತೆ ಇಂಡೋನೇಷ್ಯಾ, ತೈವಾನ್, ಪಲಾವ್, ಪಪುವಾ ನ್ಯೂಗಿನಿ ಮತ್ತು ಜಪಾನ್ ದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ
ಭೂಮಿ ನಡುಗಿದ ಅನುಭವ ಆದಕೂಡಲೇ ಜನ ಚೀರಾಡುತ್ತಾ ಮನೆಯಿಂದ ಹೊರಗೋಡಿದ್ದಾರೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ ಪ್ರಕಾರ, ಭೂಕಂಪವು ಫಿಲಿಪೈನ್ಸ್ ನ ಮಿಂಡನಾವೊ ದ್ವೀಪದ ಸರಂಗಾನಿ ಪ್ರಾಂತ್ಯದಿಂದ ಸುಮಾರು 24 ಕಿಲೋಮೀಟರ್ ಪಶ್ಚಿಮ ಭಾಗದ ಸಮುದ್ರದಲ್ಲಿ ಸಂಭವಿಸಿದೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಅನೇಕ ಕಟ್ಟಡಗಳು ಹಾನಿಗೊಳಗಾಗಿದ್ದು, ಕೆಲವು ಸಂಪೂರ್ಣ ಕುಸಿದಿವೆ ಎಂದು ಮಾಹಿತಿ ನೀಡಿದ್ದಾರೆ.
ಜನರಲ್ ಸ್ಯಾಂಟೋಸ್ ನಗರದ ಒಂದು ವಾಣಿಜ್ಯ ಸಂಕೀರ್ಣ ಸಂಪೂರ್ಣವಾಗಿ ನೆಲಸಮವಾಗಿರುವ ದೃಶ್ಯಗಳು ಕಂಡುಬಂದಿವೆ.
ಜಾಲಿಬೀ ಫಾಸ್ಟ್ಫುಡ್ ರೆಸ್ಟೋರೆಂಟ್ ಹೊಂದಿದ್ದ ಕಟ್ಟಡ ಕುಸಿದಿದ್ದು, ಮತ್ತೊಂದು ಪ್ರದೇಶದಲ್ಲಿ ಖಾಲಿಯಾಗಿದ್ದ ಶಾಲಾ ಕಟ್ಟಡವೂ ಧರೆಗುರುಳಿದೆ.
ಭೂಕಂಪದ ಸುಮಾರು ಎರಡು ಗಂಟೆಗಳ ನಂತರ 6.1 ತೀವ್ರತೆಯ ಪ್ರಬಲ ಕಂಪನ (ಆಫ್ಟರ್ಶಾಕ್) ಕೂಡ ಸಂಭವಿಸಿದ್ದು, ಜನರಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ.
ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಮುಂದಿನ ಮೂರು ಗಂಟೆಗಳ ಅವಧಿಯಲ್ಲಿ ಫಿಲಿಪೈನ್ಸ್, ಇಂಡೋನೇಷ್ಯಾ, ಪಲಾವ್, ತೈವಾನ್ ಮತ್ತು ಪಪುವಾ ನ್ಯೂಗಿನಿಯಾ ಕರಾವಳಿ ಪ್ರದೇಶಗಳಿಗೆ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ಮಿಂಡನಾವೊದ ಪೀಡಿತ ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಕರಾವಳಿ ಪ್ರದೇಶದ ನಿವಾಸಿಗಳಿಗೆ ತಕ್ಷಣ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ.
ಇಂಡೋನೇಷ್ಯಾ ಸರ್ಕಾರ ಕೂಡ ಉತ್ತರ ಸುಲಾವೆಸಿ, ಗೊರೊಂಟಾಲೊ ಮತ್ತು ಸಂಗಿಹೆ ದ್ವೀಪಗಳ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲು ಆದೇಶಿಸಿದೆ.
ಜಪಾನ್ ಕೂಡ ತನ್ನ ಪೆಸಿಫಿಕ್ ಕರಾವಳಿ ಭಾಗಗಳಿಗೆ ಸುನಾಮಿ ಸಲಹೆ ಹೊರಡಿಸಿದೆ.
