ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಪ್ರಥಮ ಜಾನಪದ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಡಾ. ಮಂಜುಳಾ ಹುಲ್ಲಹಳ್ಳಿ ಆಯ್ಕೆಯಾಗಿದ್ದಾರೆ.
ಕನ್ನಡ ಜಾನಪದ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕ ಹಾಗೂ ಚಂದ್ರ ತಾಲೂಕು ಮಹಿಳಾ ಘಟಕದ ವತಿಯಿಂದ ಜೂನ್ 30 ರಂದು ಅಜ್ಜಂಪುರದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆಯಲಿರುವ ಜಿಲ್ಲಾ ಪ್ರಥಮ ಮಹಿಳಾ ಜಾನಪದ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಜನಪದ ವಿದ್ವಾಂಸರು ಹಾಗೂ ಖ್ಯಾತ ಸಾಹಿತಿ ಡಾ. ಮಂಜುಳಾ ಹುಲ್ಲಹಳ್ಳಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ
ಈ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿ ಅವರು, ಜಾನಪದ ಸಂಸ್ಕೃತಿ ಮತ್ತು ಮಹಿಳೆಯರ ಪಾತ್ರ ಅತ್ಯಂತ ಮಹತ್ತರವಾಗಿದ್ದು, ಗ್ರಾಮೀಣ ಭಾಗದಲ್ಲಿ ಅಡಗಿರುವ ಮಹಿಳಾ ಕಲಾವಿದರ ಪ್ರತಿಭೆಯನ್ನು ಬೆಳಕಿಗೆ ತರುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಅವರು ಮಾತನಾಡಿ, ಮಹಿಳಾ ಸಮ್ಮೇಳನಗಳು ರಾಜ್ಯದಲ್ಲಿ ವಿರಳವಾಗಿ ನಡೆಯುತ್ತಿವೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳಾ ಜಾನಪದ ಸಮ್ಮೇಳನವನ್ನು ಆಯೋಜಿಸುವುದು ಶ್ಲಾಘನೀಯ, ಈ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಎಂ.ಎಸ್. ವಿಶಾಲಾಕ್ಷಮ್ಮ ಅವರು ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಹಿಳಾ ಆದ್ಯತೆಗಳು ಹಾಗೂ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಈ ಜಾನಪದ ಸಮ್ಮೇಳನವನ್ನು ಅಜ್ಜಂಪುರದಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮೇಳನದಲ್ಲಿ ಮಹಿಳಾ ಮುಖಂಡರು, ಸಾಹಿತಿಗಳು ಹಾಗೂ ವಿದ್ವಾಂಸರು ಭಾಗವಹಿಸಲಿದ್ದು, ಇದು ಐತಿಹಾಸಿಕ ಸಮ್ಮೇಳನವಾಗಲಿ ಎಂದು ಹಾರೈಸಿದರು.
ಸ್ವಾಗತ ಸಮಿತಿ ಅಧ್ಯಕ್ಷರು ಕವಿತ ಕೇಶವ ಮೂರ್ತಿ ಮಾತನಾಡಿ, ಅಜ್ಜಂಪುರದಲ್ಲಿ ಇಂತಹ ಐತಿಹಾಸಿಕ ಜಾನಪದ ಸಮ್ಮೇಳನವನ್ನು ಆಯೋಜಿಸಲು ಮುಂದಾಗಿರುವುದು ಹೆಮ್ಮೆಯ ವಿಷಯ, ಅಜ್ಜಂಪುರದ ಸರ್ವ ಜನರು ಸಹಕಾರ ನೀಡಬೇಕೆಂದು ಕೋರಿದರು.
ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಮಹಿಳಾ ಜಾನಪದ ಸಮ್ಮೇಳನವಾಗಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಮಹಿಳಾ ಕಲಾವಿದರು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರಾದ ಚಂದ್ರಪ್ಪ, ಕನ್ನಡ ಜಾನಪದ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಯಕುಮಾರಿ, ತಾಲೂಕ ಅಧ್ಯಕ್ಷೆ ಪುಷ್ಪ, ಹೋಬಳಿ ಘಟಕದ ಅಧ್ಯಕ್ಷರು ಮಧು, ರಂಜಿತ, ಪುಟ್ಟಮ್ಮ, ಮಂಜುಳಮ್ಮ, ಕಡೂರು ತಾಲೂಕ ಅಧ್ಯಕ್ಷೆ ಶೋಭಾ, ಕನ್ನಡ ಜಾನಪದ ಪರಿಷತ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ.ಸಿ. ಕಾಂತಪ್ಪ,ಗೌರವ ಅಧ್ಯಕ್ಷರು ಶಾಂತ ಗುರುಮೂರ್ತಿ, ಅಂಬಿಕಾ,ದಿವ್ಯಾ ಭೋಜರಾಜ್,ಖಜಾಂಚಿ ನವೀನ್, ಮೋಹನ್ ರಾವ್, ಜಾದವ್,ಕೇಶವ ಮೂರ್ತಿ ಹಾಗೂ ನೇಮಿ ಚಂದ್ ಜೈನ್ ಕಡೂರು, ತಾಲೂಕು ಅಧ್ಯಕ್ಷರು ಶೋಭಾ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
