ಅವೈಜ್ಞಾನಿಕ ಜಾತಿಗಣತಿ ವರದಿ ಜಾರಿ ಮಾಡದಂತೆ ಸರ್ಕಾರಕ್ಕೆ ಮನವಿ

Spread the love

ಮೈಸೂರು: ಅವೈಜ್ಞಾನಿಕ ಜಾತಿಗಣತಿ ಹೆಸರಿನಲ್ಲಿ ಸಮಾಜದ,ಸಮುದಾಯಗಳ ಸ್ವಾಸ್ಥ್ಯವನ್ನು ಕದಡಲು ರಾಜ್ಯ ಸರ್ಕಾರ
ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳಿಗೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದ ಮನವಿ ಸಲ್ಲಿಸಲಾಯಿತು.

ಜಾತಿ ಗಣತಿ ಅತ್ಯಂತ ಸೂಕ್ಷ್ಮ ವಿಷಯವಾಗಿ ಪರಿವರ್ತನೆಯಾಗಿದೆ. ರಾಜ್ಯ ಸರ್ಕಾರದ ಜಾತಿಗಣತಿ ನಮ್ಮ ಸಮುದಾಯವನ್ನು ಒಡೆಯಲು ಮಾಡಿದಂತಿದೆ. ಕಾಂತರಾಜು ಆಯೋಗದಿಂದ ಪ್ರತಿ ಮನೆಗೆ ಹೋಗಿ ವಿವರವನ್ನು ಕಲೆ ಹಾಕಿಲ್ಲ ಎಂದು ಹೇಳಲಾಗುತ್ತಿದೆ ಹೀಗೆ ಎಲ್ಲಾ ಮನೆಗಳಿಗೂ ಹೋಗದೆ, ಕಲೆ ಹಾಕಿರುವ ವಿವರಗಳಿಂದ ಕೂಡಿರುವ ಈ ವರದಿಯು ಅವೈಜ್ಞಾನಿಕವಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿ
ಸಂಘದವರು ದೂರಿದರು.

ನಮ್ಮ ರಾಜ್ಯದಲ್ಲಿ ಆಧಾರ್ ಕಾರ್ಡ್ ವಿವರಗಳ ಪ್ರಕಾರ ಸುಮಾರು 6 ಕೋಟಿ 90 ಲಕ್ಷ ಜನಸಂಖ್ಯೆ ಇದೆ. ಆದರೆ ಸಮಿತಿಯ ವರದಿಯಲ್ಲಿ 5 ಕೋಟಿ 40 ಲಕ್ಷ ಜನಸಂಖ್ಯೆ ಎಂದು ವರದಿ ಆಗಿದೆ ಇದು ನಿಜಕ್ಕೂ ಬೇಸರದ ಸಂಗತಿಯಾಗಿದೆ, ಈ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದರೆ, ಒಕ್ಕಲಿಗ ಸಮುದಾಯ ಹಾಗೂ ಇನ್ನೂ ಹಲವಾರು ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಸಂಘದ ಸದಸ್ಯರು ದೂರಿದರು.

ಇದಕ್ಕೆ ಅನವಶ್ಯಕವಾದ ಆತುರ ಬೇಡ, ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ನಿಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡಿ, ವೈಜ್ಞಾನಿಕ, ವಸ್ತುನಿಷ್ಠ, ಪಾರದರ್ಶಕವಾಗಿ ಜಾತಿಗಣತಿಯನ್ನು ಮಾಡಬೇಕು ಎಂದು
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಅಧ್ಯಕ್ಷ ಸಿ.ಜಿ ಗಂಗಾಧರ್ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಒತ್ತಾಯಿಸಿದರು.

ಒಂದು ವೇಳೆ ಈ ಅಪೂರ್ಣವಾದ ಹಾಗೂ ಅವೈಜ್ಞಾನಿಕವಾದ ಕಾಂತರಾಜು ವರದಿಯನ್ನು ಸರ್ಕಾರವು ಅಂಗೀಕರಿಸಿದರೆ, ನಮ್ಮ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾಧ್ಯಕ್ಷರುಗಳ ನೇತೃತ್ವದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಆದ್ದರಿಂದ ಈ ವರದಿಯನ್ನು ಸರ್ಕಾರ ಈ ಕೂಡಲೇ ಕೈ ಬಿಟ್ಟು, ವೈಜ್ಞಾನಿಕವಾಗಿ ಪುನಃ ಹೊಸದಾಗಿ ಪ್ರತಿ ಮನೆಗೆ ತೆರಳಿ ವಿವರಗಳನ್ನು ಕಲೆ ಹಾಕಿ ವರದಿಯನ್ನು ತೆಗೆದುಕೊಳ್ಳಬೇಕು, ಯಾವ ಜನಾಂಗಕ್ಕೂ ಅನ್ಯಾಯವಾಗಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಅಧ್ಯಕ್ಷ ಸಿ.ಜಿ ಗಂಗಾಧರ್ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ‌ ನೇತೃತ್ವದಲ್ಲಿ ಶಿವಲಿಂಗಯ್ಯ, ಸುಬ್ಬೆಗೌಡ ಹಾಗೂ ಹನುಮಂತಯ್ಯ ಮನವಿ ಸಲ್ಲಿಸಿದರು.