ಸಿದ್ದರಾಮಯ್ಯ ರಾಜೀನಾಮೆಗೆ ಹೇಮಾ ನಂದೀಶ್ ಆಗ್ರಹ

Spread the love

ಮೈಸೂರು: ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು ತಪ್ಪೆಸಗಿರುವುದು ಸಾಬೀತಾಗಿದೆ,ಹಾಗಾಗಿ‌ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾ ನಂದೀಶ್ ಒತ್ತಾಯಿಸಿದ್ದಾರೆ

ಅವರ ಪತ್ನಿ ಮುಡಾ ನಿವೇಶನಗಳನ್ನು ಹಿಂದಿರುಗಿಸಿರುವುದೇ ಇದಕ್ಕೆ ಸಾಕ್ಷಿ. ಹಾಗಾಗಿ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ರಾಜೀನಾಮೆ ನೀಡಿ ವಿಚಾರಣೆ ಎದುರಿಸಬೇಕು. ಸಿಬಿಐ ತನಿಖೆಗೂ ಕೋರ್ಟ್ ಆದೇಶಿಸುವ ಸಾಧ್ಯತೆ ಇದೆ. ತನಿಖೆ ಪೂರ್ಣಗೊಳ್ಳುವವರೆಗೂ ಅಧಿಕಾರದಿಂದ ದೂರ ಉಳಿದರೆ ಪ್ರಳಯವಾಗುವುದಿಲ್ಲ, ಪ್ರಭಾವ ಬಳಸಿ ಪಡೆದ ನಿವೇಶನಗಳನ್ನು ಪತ್ನಿ ಮೂಲಕ ವಾಪಸ್‌ ನೀಡಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ಅವರು ಟೀಕಿಸಿದ್ದಾರೆ.

ಮುಖ್ಯಮಂತ್ರಿಯವರು ಪುರಾವೆ ಸಮೇತ ಬಹಿರಂಗವಾಗಿ ಸಿಕ್ಕಿಬಿದ್ದಿದ್ದಾರೆ. ದೊಡ್ಡ, ದೊಡ್ಡ ಮಾತುಗಳನ್ನಾಡುತ್ತಿದ್ದ ಸಿದ್ದರಾಮಯ್ಯ ಅವರು ಅವಿವೇಕಿ ಮಂತ್ರಿಗಳ ಸಲಹೆಯಂತೆ ವರ್ತಿಸಿ ಗುಂಡಿಗೆ ಬಿದ್ದಿದ್ದಾರೆ. ಸಿಬಿಐ ತನಿಖೆಗೆ ಅಡ್ಡಿ, ರಾಜ್ಯಪಾಲರ ಪತ್ರಕ್ಕೆ ಉತ್ತರಿಸಲು ನಿರಾಕರಿಸುವ ಕೆಲಸ ಮಾಡಿದ್ದಾರೆ. 2013ರಿಂದ 18ರ ಅವಧಿಯಲ್ಲಿ ಅನೇಕ ಹಗರಣಗಳು ನಡೆದಿದ್ದು, ಅವೆಲ್ಲವನ್ನೂ ಮುಚ್ಚಿಕೊಳ್ಳಲು ಲೋಕಾಯುಕ್ತ ಸಂಸ್ಥೆಯನ್ನೇ ಬಂದ್‌ ಮಾಡಿದ್ದರು ಎಂದು ಹೇಮಾ‌ನಂದೀಶ್ ದೂರಿದ್ದಾರೆ.

ಮುಖ್ಯಮಂತ್ರಿ ಪತ್ನಿಗೆ ನೀಡಿದ್ದ 14 ನಿವೇಶನ ಹಾಗೂ ಮುಡಾದ 4000 ನಿವೇಶನ ಹಂಚಿಕೆ ಕುರಿತು ತನಿಖೆ ಆಗಬೇಕು,ಪ್ರತಿಪಕ್ಷ ನಾಯಕರಾಗಿದ್ದಾಗ ತಾವು ಆಡಿದ್ದ ಮಾತುಗಳನ್ನು ಸಿದ್ದರಾಮಯ್ಯ ಒಮ್ಮೆ ಅವಲೋಕಿಸಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.