ಧಾರ್ಮಿಕ, ಪ್ರಾಚೀನ ಮಾಹಿತಿಯುಳ್ಳಕ್ಯಾಲೆಂಡರ್ ಬಿಡುಗಡೆ

ಮೈಸೂರು: ಪ್ರತಿ ವರ್ಷಂತೆ ಈ ವರ್ಷವೂ ಮೇಲುಕೋಟೆಯ ಭಗವದ್ ರಾಮನುಜ ರಾಷ್ಟ್ರೀಯ ಸಂಶೋಧನ ಸಂಸತ್ ವತಿಯಿಂದ ಹೊರತರಲಾಗಿರುವ 2026 ನೇ ಸಾಲಿನ ವಿಶೇಷ ನೂತನ ಕ್ಯಾಲೆಂಡರ್ ಅನ್ನು ಅನಾವರಣಗೊಳಿಸಲಾಯಿತು.

ಭಾನುವಾರ ಮೈಸೂರಿನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ನಡೆದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ)ಯ ಮೈಸೂರು ವಿಭಾಗದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ, ಶ್ರೀರಂಗಪಟ್ಟಣದ ಚಂದನವನ ಆಶ್ರಮದ ಶ್ರೀ ಕ್ಷೇತ್ರ ಬೇಬಿ ಮಠದ ಪರಮಪೂಜ್ಯ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಮಿಗಳ ಅಮೃತ ಹಸ್ತದಿಂದ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಲಾಯಿತು.

ಮೇಲುಕೋಟೆ ಕ್ಷೇತ್ರವು ಐತಿಹಾಸಿಕ,ಪೌರಾಣಿಕ ಹಾಗೂ ಸಾಂಪ್ರದಾಯಿಕ ದೃಷ್ಟಿಕೋನಗಳಿಂದ ಪ್ರಸಿದ್ದಿಯಾಗಿರುವುದು ಸರ್ವವೇದ್ಯವಾಗಿದ್ದು, ಪುರಾಣ ಪ್ರಸಿದ್ಧವಾದ‌ ಈ ಕ್ಷೇತ್ರವು ಜ್ಞಾನಮಂಟಪವೆನಿಸಿದೆ.

ಈ ಭಾಗವನ್ನು‌ ಮನಗಂಡಿದ್ದ ಅಂದಿನ ಉಪರಾಷ್ಟ್ರಪತಿಗಳಾದ ಬಿ.ಡಿ.ಜತ್ತಿಯವರು ಭಗವದ್ರಾಮಾನುಜರ ತತ್ವ,ಸಿದ್ದಾಂತ, ದರ್ಶನ ಹಾಗೂ ಸಂಪ್ರದಾಯಗಳ ಅಮೂಲ್ಯ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಸಂಶೋಧನ ಸಂಸ್ಥೆಯೊಂದು ಸ್ಥಾಪನೆಯಾಗಬೇಕೆಂದು ಆಶಿಸಿದ್ದರು.

ಈ ಸದಾಶಯವನ್ನು ವಾಸ್ತವಗೊಳಿಸಲು,ಕರ್ನಾಟಕ ಸರ್ಕಾರವು ಪ್ರಾರಂಭಿಕ ಅನುದಾನವನ್ನು ಒದಗಿಸಿ, ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್ ಸಂಸ್ಥೆಯನ್ನು 15-10-1976 ರಲ್ಲಿ ಸ್ಥಾಪಿಸಿತು.
ಹಾಗೂ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ದಿಪಡಿಸಲು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಆಡಳಿತ ನಿರ್ವಹಣೆ ನಿಯಂತ್ರಣದೊಡನೆ ಅಧೀನಕ್ಕೆ ವಹಿಸಿದೆ.
ಅದರಂತೆ 6-02-2016 ರಿಂದ ವಿಶ್ವ ವಿದ್ಯಾಲಯದ ಅಡಿಯಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.

2026-2027 ನೇ ಸಾಲಿಗೆ ಸಂಸ್ಥೆಯ 50 ನೇ ವರ್ಷದ ಸುವರ್ಣ ಮಹೋತ್ಸವವನ್ನು ಆಚರಿಸುವಲ್ಲಿ ಕ್ರಿಯಾಯೋಜನೆ ರೂಪಿಸಿದೆ.
ಸಂಸ್ಥೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ತಾಳಪತ್ರ ಮತ್ತು ಹಸ್ತಪ್ರತಿ ಸಂಗ್ರಹಿಸಿ ಸಂರಕ್ಷಿಸಿಡಲಾಗಿದೆ.

ಸಂರಕ್ಷಣಾ ದೃಷ್ಟಿಯಿಂದ ಡಿಜಿಟಲೀಕರಣ ಕಾರ್ಯ ಕೈಗೊಂಡು ಈಗಾಗಲೇ 4 ಲಕ್ಷಕ್ಕೂ ಅಧಿಕ ತಾಳೆ ಎಲೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಉಳಿದ ಕಾರ್ಯವೂ ಪ್ರಗತಿಯಲ್ಲಿದೆ.

ಸಂಗ್ರಹಿಸಲ್ಪಟ್ಟಿರುವ ಎಲ್ಲಾ ತಳಪತ್ರಗಳ ಹಸ್ತಪ್ರತಿ ಸೂಚಿಯನ್ನು 18 ಸಂಪುಟಗಳಲ್ಲಿ ಹೊರತರಲಾಗಿದೆ.ಹಾಗೆಯೇ ಅಪ್ರಕಟಿತ ತಾಳಪತ್ರಗಳನ್ನು ಗುರುತಿಸಿ ಸಂಶೋಧನ ಕೃತಿಯ ಮೂಲಕ ಹೊರತರುವ ಪ್ರಕ್ರಿಯೆ ಮುಂದುವರೆದಿದೆ.

ಮೇಲುಕೋಟೆಯು ಆಚಾರ್ಯ ರಾಮಾನುಜರ ತಪೋಭೂಮಿ, ಕರ್ಮಭೂಮಿಯಾಗಿದ್ದು, ಅವರ ಅಭಿಮಾನ ಕ್ಷೇತ್ರವೂ ಆಗಿದೆ.

ಅವರ ವಿಚಾರಧಾರೆಯನ್ನು ಪ್ರಚಾರಪಡಿಸಲು ಈ ಸಂಸ್ಥೆಯು ಸರ್ಕಾರದ ಆಶಯದಂತೆ ಉಗಮವಾಗಿದೆ. ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿದ್ದು ಸಂಸ್ಥೆಯ ಕಾರ್ಯಚಟುವಟಿಕೆ ಹಾಗೂ ಮೇಲುಕೋಟೆಯ ಇತಿಹಾಸ, ಧಾರ್ಮಿಕತೆ ಮುಂತಾದ ವಿಷಯಗಳನ್ನು ಜನಮಾನಸಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಉಪ ಕುಲಪತಿಗಳಾದ ಡಾ. ಎಸ್. ಅಹಲ್ಯಾಶರ್ಮ ಅವರ ನಿರ್ದೇಶನದಂತೆ 2025ರ ಸಾಲಿಗೆ ಕ್ಯಾಲೆಂಡರ್ ಹೊರತರುವ ಕಾರ್ಯವನ್ನು ಪ್ರಾರಂಭಿಸಲಾಯಿತು.

ಈ ಮಹತ್ಕಾರ್ಯವು ಡಾ. ಎ. ಪುಷ್ಪಅಯ್ಯಂಗಾರ್ ಹಾಗೂ ಡಾ. ಎ. ವೈದೇಹಿ ಆಯ್ಯಂಗಾರ್, ಮೆ. ಸತ್ಯವತಿ ವಿಜಯ ರಾಘವಾಚಾರ್ ಛಾರಿಟಬಲ್ ಟ್ರಸ್ಟ್ (ರಿ.). ಮೈಸೂರು ಇವರ ಆರ್ಥಿಕ ಸಹಕಾರದಿಂದ ಸಾಧ್ಯವಾಗಿದೆ.

ಅದರಂತೆ ಪ್ರಸಕ್ತ ವರ್ಷ ಸಂಸ್ಥೆಯ ಕಾರ್ಯಚಟುವಟಿಕೆ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪ್ರಾಚೀನ ಕೊಳಗಳ ಪರಿಚಯವನ್ನು ಜನಮಾನಸಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ಕ್ಯಾಲೆಂಡರ್ 2026ನ್ನು ಲೋಕಾರ್ಪಣೆಗೊಳಿಸಲಾಗಿದೆ.

ಕ್ಯಾಲೆಂಡರ್ ಲೋಕಾರ್ಪಣೆ ಸಂದರ್ಭದಲ್ಲಿ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್ ನ ಕುಲಸಚಿವ( ಆಡಳಿತ) ರಾದ ಎಸ್.ಕುಮಾರ್, ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್,ಶ್ರೀನಿವಾಸನ್, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಮಾರ್ಗದರ್ಶಕರಾದ ಕೆ.ಎಸ್.ಗೋಪಾಲಕೃಷ್ಣ,
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಎಸ್ ಅಹಲ್ಯ, ಭಾರತೀ ಯೋಗಧಾಮದ ಸಂಸ್ಥಾಪಕರಾದ ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸ್,ಪ್ರಾಂತ ವಿಸ್ಥಾರ ಪ್ರಮುಖರಾದ ಎಂ.ರೆಡ್ಡಯ್ಯರಾಜು, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಕೇಂದ್ರ ಸಮಿತಿ( ತುಮಕೂರು) ಯ ಕೋಶಾಧ್ಯಕ್ಷರಾದ ಎನ್.ಎಸ್.ಮಹೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.