ಹುಣಸೂರು: ಅಪರಿಚಿತ ವಾಹನ ಹಿಂದಿನಿಂದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೆರೆಗೆ ಉರುಳಿ ಎಳನೀರು ವ್ಯಾಪಾರಿ ಮೃತಪಟ್ಟಿರುವ ಘಟನೆ ಹುಣಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಹುಣಸೂರು ಗ್ರಾಮಾಂತರ ವ್ಯಾಪ್ತಿಯ ಎಳನೀರು ವ್ಯಾಪಾರಿ ರಾಜು ಮೃತಪಟ್ಟ ದುರ್ದೈವಿ.
ವಿಷಯ ತಿಳಿಯುತ್ತಿದ್ದಂತೆ ಹುಣಸೂರು ಪಟ್ಟಣ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.
ಸ್ಥಳಕ್ಕೆ ಮಾಜಿ ಶಾಸಕ ಮಂಜುನಾಥ್ ಮತ್ತು ಉದ್ದೂರು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರೇಮೇಗೌಡ ಹಾಗೂ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಸೇರಿದಂತೆ ಅನೇಕ ಮುಖಂಡರು ಧಾವಿಸಿ ಕೆರೆಯಿಂದ ಮೃತ ರಾಜು ದೇಹವನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲು ಪೊಲೀಸರಿಗೆ ನೆರವಾದರು.
ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಾಪಾರಿಯ ಮೃತದೇವನ್ನು ಇರಿಸಲಾಗಿದ್ದು ಕುಟುಂಬಸ್ಥರು ಧಾವಿಸಿದರು.
ಅವರ ದುಃಖದ ಕಟ್ಟೆ ಒಡೆದಿತ್ತು.
ತಡೆಗೋಡೆ ನಿರ್ಮಿಸಲು ಚೆಲುವರಾಜು ಆಗ್ರಹ:
ಮೈಸೂರು-ಮಡಿಕೇರಿ ಹೆದ್ದಾರಿ ಹುಣಸೂರು ಸಮೀಪ ಕೆರೆ ರಸ್ತೆಗೆ ಹೊಂದಿಕೊಂಡಿದೆ. ಇದಕ್ಕೆ ಯಾವುದೇ ತಡೆಗೋಡೆಇಲ್ಲ. ಹಾಗಾಗಿ ಇಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಲೇ ಇರುತ್ತವೆ. ನಾವು ಬಹಳ ವರ್ಷಗಳಿಂದ ತಾಲೂಕು ಆಡಳಿತವನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ಸರ್ಕಾರದ ಗಮನಕ್ಕೂ ತಂದಿದ್ದೇವೆ ಆದರೂ ಏನೂ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಹುಣಸೂರಿನ ಶಾಸಕರ ಈ ದೊಡ್ಡ ಕೆರೆಗೆ ತಡೆಗೋಡೆ ನಿರ್ಮಿಸಲೇಬೇಕೆಂದು ಮತ್ತು ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.
ಅಪರಿಚಿತ ವಾಹನ ಡಿಕ್ಕಿ:ಕೆರೆಗೆ ಗೂಡ್ಸ್ ಆಟೋ ಉರುಳಿ ಎಳನೀರು ವ್ಯಾಪಾರಿ ಸಾವು