ಲೋಕ್ ಅದಾಲತ್‍ನಲ್ಲಿ 1,20,045 ಪ್ರಕರಣಗಳು ಇತ್ಯರ್ಥ: ನ್ಯಾ.ಜಿ. ಪ್ರಭಾವತಿ

ಚಾಮರಾಜನಗರ: ಈ ಬಾರಿಯ ಲೋಕ್ ಅದಾಲತ್‍ನಲ್ಲಿ 1,20,045 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ವಾಜ್ಯಪೂರ್ವ ಪರಿಹಾರ ಕೇಂದ್ರದಲ್ಲಿ ಈ ವಿಷಯ ತಿಳಿಸಿದ ಅವರು ಕಳೆದ ಬಾರಿಯ ಲೋಕ್ ಅದಾಲತ್‍ನಲ್ಲಿ 1,04,649 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿತ್ತು. ಇತ್ತೀಚೆಗೆ ಅಂದರೆ ಡಿ.13ರಂದು ನಡೆದ ಅದಾಲತ್‍ನಲ್ಲಿ 2642 ನ್ಯಾಯಾಲಯ ಪ್ರಕರಣಗಳು ಹಾಗೂ 1,17,403 ವ್ಯಾಜ್ಯಪೂರ್ವ ಸೇರಿದಂತೆ ಒಟ್ಟು 1,20,045 ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಹೇಳಿದರು.

ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ‘ಸರ್ವರಿಗೂ ನ್ಯಾಯ’ ಪರಿಕಲ್ಪನೆಯಡಿ ಜನಸಾಮಾನ್ಯರ ಅನುಕೂಲಕ್ಕಾಗಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ಜಿಲ್ಲೆಯ ತಾಲೂಕು ಕಾನೂನು ಸೇವಾ ಪ್ರಾಧಿಕಾರಗಳಲ್ಲಿ ಎಲ್ಲಾ ರೀತಿಯ ಸಿವಿಲ್, ರಾಜಿಯೋಗ್ಯ ಕ್ರಿಮಿನಲ್ ಪ್ರಕರಣಗಳು, ಇತರೆ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಲು ಮೆಗಾ-ಲೋಕ್ ಅದಾಲತ್ ಏರ್ಪಡಿಸಲಾಗಿತ್ತು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

ಈ ಬಾರಿಯ ಲೋಕ್ ಅದಾಲತ್‍ನಲ್ಲಿ ಚಾಮರಾಜನಗರದ 665, ಯಳಂದೂರು 230, ಕೊಳ್ಳೇಗಾಲ 1089 ಹಾಗೂ ಗುಂಡ್ಲುಪೇಟೆಯ 658 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯದ ಒಟ್ಟು 1,17,403 ಸೇರಿದಂತೆ 1,20,045 ಪ್ರಕರಣಗಳು ಇತ್ಯರ್ಥಗೊಂಡಿದೆ ಎಂದರು.ಒಟ್ಟು 2642 ಪ್ರಕರಣಗಳಲ್ಲಿ 10,89,73,167 ರೂ.ಗಳು ಹಾಗೂ 1,17,403 ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 4,91,38,228 ರೂಪಾಯಿ ಒಟ್ಟು 15,81,11,395 ಮೊತ್ತವನ್ನ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೌಟುಂಬಿಕವಾಗಿ ವಿವಾಹ ವಿಚ್ಛೇಧನ, ಪತಿ ಅಥವಾ ಪತ್ನಿಯಿಂದ ಜೀವನಾಂಶ ಕೋರಿಕೆ ಹಾಗೂ ವಿಚ್ಚೇಧನಾ ಪ್ರಕರಣ ದಾಖಲಾಗುವ ದೂರುಗಳು ಸೇರಿದಂತೆ ಒಟ್ಟು ೧೧ ಪ್ರಕರಣಗಳನ್ನು ಇತ್ಯರ್ಥಪಡಿಸಿ ಪತಿ-ಪತ್ನಿಯರನ್ನು ಒಂದುಗೂಡಿಸಲಾಗಿದೆ ಎಂದು ಹೇಳಿದರು.

ನ್ಯಾಯಾಲಯದಲ್ಲಿದ್ದ ಬಾಕಿ ರಾಜಿಯೋಗ್ಯ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳ ಕಕ್ಷಿದಾರರು ನ್ಯಾಯಾಧೀಶರು, ವಕೀಲರು, ಸಂಧಾನಕಾರರಿಂದ ಲೋಕ್ ಅದಾಲತ್ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ 10-15 ವರ್ಷಗಳಿಂದ ಬಾಕಿ ಇದ್ದ 7 ಪ್ರಕರಣಗಳನ್ನು ರಾಜಿ ಮೂಲಕ ಹಾಗೂ ಅಪಘಾತ ವಿಮಾ ಪರಿಹಾರ ಸೇರಿದಂತೆ ಪ್ರಕರಣ ಇತ್ಯರ್ಥಪಡಿಸಲಾಗಿದೆ.
ಅಲ್ಲದೆ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಾಗುವ ಮೊದಲೆ ಸಾಕಷ್ಟು ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥವಾಗಿರುವುದು ಹರ್ಷದಾಯವಾಗಿದೆ. ಇದರಿಂದ ಕಕ್ಷಿದಾರರ ಸಮಯ, ಹಣ, ಉಳಿತಾಯವಾಗಿದೆ. ನ್ಯಾಯಾಲಯದ ಹೊರೆಯೂ ತಗ್ಗಿದೆ. ಅದಾಲತ್ ಯಶಸ್ಸಿಗೆ ಕಾರಣರಾದ ಜಿಲ್ಲಾಡಳಿತ, ವಿವಿಧ ಇಲಾಖೆಗಳು, ಬ್ಯಾಂಕ್‍ಗಳಿಗೆ ಅಭಿನಂದನೆಗಳನ್ನು ಜಿ. ಪ್ರಭಾವತಿ ಅವರು ತಿಳಿಸಿದರು.

ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಸಕ್ತ (2025) ವರ್ಷದಲ್ಲಿ ನಾಲ್ಕು ಲೋಕಾ ಅದಾಲತ್ ನಡೆದಿತ್ತು ನ್ಯಾಯಾಲಯದ ಒಟ್ಟು ಪ್ರಕರಣ10,183, ಪೂರ್ವ ವ್ಯಾಜ್ಯದ 3,90,249 ಒಟ್ಟು 400432 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಇದೇ ‌ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ. ಪ್ರಭಾವತಿ ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್, ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಿ.ಡಿ. ಪ್ರಕಾಶ್ ಹಾಜರಿದ್ದರು.