ನಂಜನಗೂಡು: ಹೆಣ್ಣು ಮಕ್ಕಳಿಗೆ ಕರಾಟೆಯು ಸ್ವರಕ್ಷಣೆ ಹಾಗೂ ಮನೋ ಬಲವೃದ್ದಿಗೆ ಸಹಕಾರಿಯಾಗಲಿದೆ ಎಂದು ಕರಾಟೆ ತರಬೇತಿದಾರ ಮುರಳಿ ತಿಳಿಸಿದರು.
ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೆಣ್ಣು ಮಕ್ಕಳಿಗೆ ಹಮ್ಮಿಕೊಂಡಿದ್ದ ವಿಶೇಷ ಕರಾಟೆ ಸ್ವರಕ್ಷಣಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸುರಕ್ಷತೆ, ಆತ್ಮರಕ್ಷಣೆ ಹಾಗೂ ಆತ್ಮವಿಶ್ವಾಸ ವೃದ್ಧಿ ಹೆಚ್ಚಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ದಿನೇಶ್ ಅವರು ಮಾತನಾಡಿ,ಇಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸ್ವರಕ್ಷಣಾ ಕೌಶಲ್ಯ ತಿಳಿದುಕೊಳ್ಳುವುದು ಅತ್ಯಂತ ಅಗತ್ಯ ಎಂದು ತಿಳಿಹೇಳಿದರು.
ಕರಾಟೆ ತರಬೇತಿ ದೇಹದ ಬಲವರ್ಧನೆಯಷ್ಟೇ ಅಲ್ಲ, ಮನೋಬಲ ಮತ್ತು ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ ಎಂದು ಹೇಳಿದರು.
ಸ್ವರಕ್ಷಣೆಯ ಮೂಲ ತಂತ್ರಗಳು, ತುರ್ತು ಪರಿಸ್ಥಿತಿಯಲ್ಲಿ ಪ್ರತಿಕ್ರಿಯಿಸುವ ವಿಧಾನಗಳು ಹಾಗೂ ದಿನನಿತ್ಯದ ಸುರಕ್ಷತಾ ಸಲಹೆಗಳನ್ನು ವಿದ್ಯಾರ್ಥಿನಿಯರಿಗೆ ಬೋಧಿಸಲಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಹಿರಿಯ ಉಪನ್ಯಾಸಕರಾದ ಲಿಂಗಣ್ಣಸ್ವಾಮಿ ಅವರು ಮಾತನಾಡಿ, ಯುವತಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ದಿಟ್ಟತನ ಹೊಂದಿರಬೇಕು. ಇದೇ ಮನೋಭಾವದಿಂದ ಈ ತರಬೇತಿಯನ್ನು ಆಯೋಜಿಸಲಾಗಿದ್ದು, ಮುಂದುವರಿದ ದಿನಗಳಲ್ಲಿ ಇದು ವಿದ್ಯಾರ್ಥಿನಿಯರಿಗೆ ಉಪಯುಕ್ತವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ಕರಾಟೆ ತರಬೇತಿ ಪಡೆದ ಮಕ್ಕಳು ಸಮಾರಂಭದಲ್ಲಿ ಕರಾಟೆಯ ವಿವಿಧ ಆಯಾಮಗಳನ್ನು ಪ್ರದರ್ಶಿಸಿದರು.
ಸ್ವರಕ್ಷಣೆಯ ವಿಧಾನಗಳನ್ನು ಪ್ರಾತ್ಯಕ್ಷಿಕೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.
ಪ್ರತಿನಿತ್ಯ ಬೆಳಗಿನ ಅವಧಿಯಲ್ಲಿ ಕರಾಟೆ ತರಗತಿಗಳನ್ನು ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಏರ್ಪಡಿಸಲಾಗಿದ್ದು, ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗ ಹಾಜರಿದ್ದರು.
ಹೆಣ್ಣು ಮಕ್ಕಳಿಗೆ ಕರಾಟೆಯು ಸ್ವರಕ್ಷಣೆ; ಮನೋಬಲ ವೃದ್ದಿಗೆ ಸಹಕಾರಿ:ಮುರಳಿ