ಗಣಪತಿ ಆಶ್ರಮದಲ್ಲಿ ವಿಶ್ವಶಾಂತಿಗಾಗಿ ದತ್ತ ಜಯಂತಿ ಆಚರಣೆ

ಮೈಸೂರು: ನಾಡಿನಾದ್ಯಂತ ದತ್ತಾತ್ರೇಯ ಜಯಂತಿಯನ್ನು ಸಡಗರದಿಂದ ಆಚರಿಸಲಾಗುತ್ತಿದ್ದು,ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶ್ವಶಾಂತಿಗಾಗಿ ದತ್ತ ಜಯಂತಿ ಆಚರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ವೇಳೆ ಶ್ರೀ ಗಣಪತಿ ಸಚ್ಚಿದಾನಂದ
ಸ್ವಾಮೀಜಿಯವರು ದತ್ತಾತ್ರೇಯ ಮಹಿಮೆ ಹಾಗೂ ಪುರಾಣಗಳಲ್ಲಿ ದತ್ತನ ಇರುವಿಕೆಯ ಬಗ್ಗೆ ತಿಳಿಸಿದರು.
ದತ್ತಾತ್ರೇಯ ಮಹಾವಿಷ್ಣುವಿನ ಆರನೇ ಅವತಾರ. ಅತ್ರಿ ಮತ್ತು ಅನುಸೂಯೆಯರಿಗೆ ಮಗನಾಗಿ ಬಂದವನು. ಆ ಕಾಲದ ರಾಜರುಗಳಿಗೆ ಮತ್ತು ಜನಸಾಮಾನ್ಯರಿಗೆ ಅದ್ಭುತವಾದ ಬೋಧನೆಗಳನ್ನು ಮಾಡಿದ ಜ್ಞಾನಸಾಗರ ಈ ದತ್ತಾತ್ರೇಯ ಎಂದು ಬಣ್ಣಿಸಿದರು.
ವೇದ-ಪುರಾಣಗಳಲ್ಲಿ ದತ್ತನ ಇರುವಿಕೆ:
ದತ್ತಾತ್ರೇಯರು ಕೇವಲ ದತ್ತ ಪರಂಪರೆಗೆ ಸೀಮಿತರಲ್ಲ, ಅವರು ವೇದ, ಮಹಾಭಾರತ ಮತ್ತು ರಾಮಾಯಣ ಕಾಲಘಟ್ಟದಲ್ಲೂ ಇದ್ದರು ಎಂದು ಶ್ರೀಗಳು ವಿವರಿಸಿದರು.
ದತ್ತಾತ್ರೇಯರು ಸಂಚಾರಿಗಳು, ಅವರಿಗೆ ಇಂಥದ್ದೇ ನೆಲೆ ಅಂತಿಲ್ಲ. ಅವರು ಎಲ್ಲೆಡೆ ಇರುತ್ತಾರೆ. ರಾಮಾಯಣದಲ್ಲಿ ರಾಮನಿಗೆ ದತ್ತಾತ್ರೇಯರು ಕಾಣಿಸಿಕೊಳ್ಳುತ್ತಾರೆ, ಎಂದು ಪೌರಾಣಿಕ ಹಿನ್ನೆಲೆಯನ್ನು ತೆರೆದಿಟ್ಟರು.
ಸೀತೆಯ ಆಭರಣ ಮತ್ತು ಅನುಸೂಯೆ
ರಾಮಾಯಣದ ಸ್ವಾರಸ್ಯಕರ ಪ್ರಸಂಗವೊಂದನ್ನು ಉಲ್ಲೇಖಿಸಿದ ಶ್ರೀಗಳು, ರಾಮ ವನವಾಸಕ್ಕೆ ಹೋದಾಗ ಮೊದಲು ಭೇಟಿ ನೀಡಿದ್ದು ಅತ್ರಿ ಮಹರ್ಷಿಗಳ ಆಶ್ರಮಕ್ಕೆ. ಅಲ್ಲಿ ಅತಿಥಿ ಸತ್ಕಾರದ ನಂತರ ಅನುಸೂಯೆ ಸೀತೆಗೆ ದಿವ್ಯವಾದ ಆಭರಣಗಳು ಮತ್ತು ಬಾಡದ ಹೂವುಗಳನ್ನು ನೀಡುತ್ತಾಳೆ. ಆಗ ರಾಮ, ‘ಎಲ್ಲವನ್ನೂ ತ್ಯಜಿಸಿ ಬಂದ ನಮಗೆ ಈ ಒಡವೆಗಳು ಏಕೆ?’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಉತ್ತರಿಸಿದ ಅನುಸೂಯೆ, ‘ಇವು ಸಾಮಾನ್ಯ ಒಡವೆಗಳಲ್ಲ, ಅರಣ್ಯದಲ್ಲಿ ಸಂಚರಿಸುವಾಗ ಇವುಗಳ ಅವಶ್ಯಕತೆ ಇದೆ’ ಎಂದು ಹೇಳುತ್ತಾಳೆ.
“ಮುಂದೆ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ, ಸೀತೆ ಇದೇ ಆಭರಣಗಳನ್ನು ಗುರುತುಗಾಗಿ ಕೆಳಗೆ ಎಸೆಯುತ್ತಾಳೆ. ರಾಮ ಮತ್ತು ಲಕ್ಷ್ಮಣರು ಸೀತೆಯನ್ನು ಹುಡುಕುವಾಗ ಈ ದಿವ್ಯ ಆಭರಣಗಳೇ ದಾರಿದೀಪವಾಗುತ್ತವೆ. ಇದು ದತ್ತಾತ್ರೇಯರ ಕೃಪೆಯಿಂದಲೇ ನಡೆದಿದ್ದು ಎಂದು ಶ್ರೀಗಳು ವಿವರಿಸಿದರು.
ಪಟ್ಟಾಭಿಷೇಕ ಮತ್ತು ಪಿಂಗಳ ನಾಗ:
ಶ್ರೀರಾಮ ಪಟ್ಟಾಭಿಷೇಕದ ಸಂದರ್ಭದ ಮತ್ತೊಂದು ಅಪರೂಪದ ಕಥೆಯನ್ನು ಶ್ರೀಗಳು ಹಂಚಿಕೊಂಡರು. “ಪಟ್ಟಾಭಿಷೇಕದ ಸಮಯದಲ್ಲಿ ರಾಮ ಎಲ್ಲೋ ನೋಡುತ್ತಾ ಅನ್ಯಮನಸ್ಕನಾಗಿರುತ್ತಾನೆ. ಆಗ ಹನುಮಂತ (ಪಿಂಗಳ ನಾಗ) ರಾಮನನ್ನು ಪ್ರಶ್ನಿಸಿದಾಗ, ‘ನನ್ನ ಭಕ್ತನೊಬ್ಬ ಪಿಂಗಳ ನಾಗನ ರೂಪದಲ್ಲಿ ಬಂದಿದ್ದಾನೆ, ಅವನ ದರ್ಶನವಾಗುವರೆಗೂ ಪಟ್ಟಾಭಿಷೇಕ ಬೇಡ’ ಎಂದು ರಾಮ ಹೇಳುತ್ತಾನೆ. ಆ ಭಕ್ತನ ದರ್ಶನವಾದ ನಂತರವೇ ಪಟ್ಟಾಭಿಷೇಕ ನೆರವೇರುತ್ತದೆ,” ಎಂದು ದತ್ತ ತತ್ವದ ಗೂಢಾರ್ಥವನ್ನು ತಿಳಿಸಿಕೊಟ್ಟರು.
ವಿಶ್ವಶಾಂತಿಗಾಗಿ ಪ್ರಾರ್ಥನೆ: ದತ್ತ ಜಯಂತಿ ಪ್ರಯುಕ್ತ ವಿಶೇಷ ಪೂಜೆ ಮತ್ತು ಅಭಿಷೇಕಗಳನ್ನು ನಡೆದಿವೆ, ಪ್ರಪಂಚಕ್ಕೆ ಶಾಂತಿಯಾಗಲಿ, ಜನರಿಗೆ ಸದ್ಬುದ್ಧಿ ಸಿಗಲಿ ಎನ್ನುವುದು ನಮ್ಮ ಆಶಯ,” ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.

ನಂತರ ಭಕ್ತರು ದತ್ತಾತ್ರೇಯ ಸ್ವಾಮಿಗೆ ತೈಲಾಭಿಷೇಕ ಮಾಡಿದರು.
ಇದೇ ಸಂದರ್ಭದಲ್ಲಿ ಫೆಬ್ರವರಿ 14 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಶ್ರಮದ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಹನುಮಾನ್ ಚಾಲೀಸಾ ಪಾರಾಯಣದ ಪೋಸ್ಟರ್ ಗಳನ್ನು ಶ್ರೀಗಳು ಬಿಡುಗಡೆ ಮಾಡಿದರು.
ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಉದ್ಯಮಿ ರಾಮೇಗೌಡ ಉಪಸ್ಥಿತರಿದ್ದರು.