5 ನೆ ದಿನದ ಯುವ ಸಂಭ್ರಮದಲ್ಲಿ ಕುಣಿದ ಜನತೆ

Spread the love

ಮೈಸೂರು: ದಸರಾ ಯುವ ಸಂಭ್ರಮದ 5 ನೇ ದಿನದ‌ ವೈಭವದಲ್ಲಿ ವಯಸ್ಸಿನ ಮಿತಿಯಿಲ್ಲದೆ ಸಾವಿರಾರು ಮಂದಿ ಕಣ್ತುಂಬಿಕೊಂಡರು.

ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ನಿಶ್ಯಬ್ದದಿಂದ ಕೂಡಿದ್ದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರ, ವೇದಿಕೆಯ ಮೇಲೆ ವಿದ್ಯಾರ್ಥಿಗಳು ಪ್ರದರ್ಶನ ಆರಂಭಿಸುತ್ತಿದ್ದಂತೆಯೇ ಜನ ಕೂಡಾ ಕುಣಿದು‌ ಕುಪ್ಪಳಿಸಿದರು.

ಪ್ರತಿ ನೃತ್ಯ ಪ್ರದರ್ಶನಕ್ಕೂ ಪ್ರೋತ್ಸಾಹ ನೀಡಿ ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು ತುಂಬುತ್ತಿದ್ದರು.
ಜೊತೆಗೆ ತಮ್ಮ ನೆಚ್ಚಿನ ಹಾಡು ಬಂದಾಗ ವಿದ್ಯಾರ್ಥಿಗಳೊಂದಿಗೆ ಕುಣಿದರು.

ಬೆಂಗಳೂರಿನ ಅರುಣೋದಯ ಕಾಲೇಜಿನ ರೈತ ಪ್ರಧಾನ ಪ್ರದರ್ಶನಕ್ಕೆ ಜನರು ಶಿಳ್ಳೆ ಚಪ್ಪಾಳೆ ಹೊಡೆದರೆ, ಮೈಸೂರಿನ ಎಂ ಐ ಟಿ ಕಾಲೇಜಿನ ಮಹಾದೇವನ ಭಕ್ತಿ ಪ್ರಧಾನ ಪ್ರದರ್ಶನಕ್ಕೆ ಮಾರುಹೋದರು.

ಲಕ್ಷ್ಮೀ ವೈಷ್ಣವ ಕಾಲೇಜಿನ ವಿದ್ಯಾರ್ಥಿಗಳು ಪ್ರೇಕ್ಷಕರ ಮುಂದೆ ರಾಮಾಯಣವನ್ನು ಮರು ಸೃಷ್ಟಿ ಮಾಡಿದರೆ, ಹೊಳೆನರಸೀಪುರದ ಕಾಲೇಜು ವಿದ್ಯಾರ್ಥಿಗಳು ಕರಾಟೆ ಕಿಂಗ್ ಶಂಕರ್ ನಾಗ್ ಅವರ ನೆನಪನ್ನು ತರುವ ಮೂಲಕ ಯುವಜನರನ್ನು ರೋಮಾಂಚನಗೊಳಿಸಿದರು.

ಮಹಿಳಾ ಸ್ವತಂತ್ರ ವಿಷಯದ ಮೇಲೆ ಮಾಡಿದ ನೃತ್ಯವನ್ನು ಕಣ್ತುಂಬಿಕೊಂಡ ಜನತೆ, ಎಚ್. ಡಿ ದೇವಗೌಡ ಕಾಲೇಜು ವಿದ್ಯಾರ್ಥಿಗಳ ಭಕ್ತಿ ಪ್ರಧಾನ ಪ್ರದರ್ಶನಕ್ಕೆ ಬೆರಗಾದರು.

ಹುಲಿಕುಣಿತ ಹಾಗೂ ಭರತನಾಟ್ಯಕ್ಕೆ ಚಪ್ಪಾಳೆಯ ಸುರಿಮಳೆಯೇ ಬಂದಿತು. ನಿರ್ಮಲಾ ಕಾಲೇಜು ವಿದ್ಯಾರ್ಥಿಗಳ ಕನ್ನಡ ಪ್ರೇಮದ ಪ್ರದರ್ಶನ ಎಲ್ಲಾ ಕನ್ನಡಿಗರ ಮನಮುಟ್ಟಿತು. ಮೈಸೂರಿನ ಮಹಾರಾಜ ಕಾಲೇಜಿನ ಜೈ ಭೀಮ್ ಪ್ರದರ್ಶನವು ಜನಮೆಚ್ಚುಗೆ ಪಡೆಯಿತು.