ಬೆಂಗಳೂರು: ಆಮ್ ಆದ್ಮಿ ಪಕ್ಷದ ಜಿಬಿಎ ಚುನಾವಣಾ ಸಮಿತಿಯನ್ನು ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಘೋಷಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಬಿಎ ಚುನಾವಣಾ ಸಮಿತಿಯನ್ನು ಮುಖ್ಯಮಂತ್ರಿ ಚಂದ್ರು ಘೋಷಿಸಿದರು.

ನಂತರ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದ ಮೂರು ಪಕ್ಷಗಳು ಬೆಂಗಳೂರು ಪಾಲಿಕೆ ಚುನಾವಣೆಗಳನ್ನು ನಡೆಸದೆ,ವಾರ್ಡ್ ಮಟ್ಟದಲ್ಲಿ
ಜನಪ್ರತಿನಿಧಿಗಳಿಲ್ಲದೆ ಬೆಂಗಳೂರಿನ ಪರಿಸ್ಥಿತಿ ಹೇಳ ತೀರದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಯಾವೊಬ್ಬ ಶಾಸಕರಿಗೂ ಈ ಬಗ್ಗೆ ಕಾಳಜಿ ಇಲ್ಲ, ವಿಶ್ವಮಟ್ಟದಲ್ಲಿ ಸಿಲಿಕಾನ್ ನಗರಿ ಎಂಬ ಖ್ಯಾತಿ ಹೊಂದಿದ್ದ ಬೆಂಗಳೂರು ಇಂದು ಗಾರ್ಬೇಜ್ ನಗರವಾಗಿ ಪರಿವರ್ತಿತವಾಗಿರುವುದು ದುರಂತ ಎಂದು ಹೇಳಿದರು.
ಕಳೆದ ಕೆಲ ದಶಕಗಳಿಂದ ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಂದಾಗಿ ನಗರದ ಮೂಲಭೂತ ಸೌಕರ್ಯಗಳ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳೆಲ್ಲವೂ ಅತ್ಯಂತ ಕಳಪೆ ಮಟ್ಟದ್ದಾಗಿದ್ದು,ನಾಗರಿಕರು ಪ್ರತಿ ದಿವಸ ಪರಿತಪಿಸುವಂತಾಗಿದೆ ಎಂದು ಹೇಳಿದರು.
ಸಾವಿರಾರು ಕೋಟಿ ರೂಪಾಯಿಗಳು ಭ್ರಷ್ಟಾಚಾರಿಗಳ ಪಾಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿ ದಿವಸ ಪಾಲಿಕೆಯ ಕರ್ಮಕಾಂಡಗಳು ಬಯಲಾಗುತ್ತಿದ್ದರೂ ಸಹ ಯಾರಿಗೂ ಸಹ ಕಠಿಣ ಶಿಕ್ಷೆಯಾಗುತ್ತಿಲ್ಲ” ಎಂದು ಮುಖ್ಯಮಂತ್ರಿ ಚಂದ್ರು ಕಿಡಿ ಕಾರಿದರು.
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ, ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ಹಿರಿಮೆ, ಗರಿಮೆ, ಗೌರವವನ್ನು ಮತ್ತೆ ಮರು ಸ್ಥಾಪಿಸುವ ಸುಸಂದರ್ಭ ಇಂದು ಬಂದಿದೆ ಎಂದು ತಿಳಿಸಿದರು.
ನಾಗರಿಕರೆಲ್ಲರೂ ಒಂದಾಗಿ ಪ್ರಾಮಾಣಿಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಮುಂಬರುವ ಚುನಾವಣೆಯಲ್ಲಿ ಅಯೋಗ್ಯರಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಮನವಿ ಮಾಡಿದರು.
ಆಮ್ ಆದ್ಮಿ ಪಕ್ಷವು ಬೆಂಗಳೂರಿನಲ್ಲಿಯೇ ಹುಟ್ಟಿ ಇಂದು ಅತ್ಯಂತ ಸಂಘಟನಾತ್ಮಕವಾಗಿ ಬೆಳೆದಿದೆ. ಪಕ್ಷದ ಮೂಲ ಸಿದ್ದಾಂತವಾಗಿರುವ ಪ್ರತಿಯೊಬ್ಬರಿಗೂ ವಿಶ್ವ ಗುಣಮಟ್ಟದ ಸರ್ಕಾರಿ ಶಿಕ್ಷಣ ವ್ಯವಸ್ಥೆ, ಆರೋಗ್ಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ಬೆಂಗಳೂರು ನಗರದಲ್ಲಿಯೂ ಅಧಿಕಾರ ಸ್ಥಾಪಿಸುವ ಮೂಲಕ ತಲುಪಿಸುವುದೇ ನಮ್ಮ ಮುಂದಿನ ಗುರಿಯಾಗಿದೆ ಎಂದು ತಿಳಿಸಿದರು.
ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ, ಈಗಾಗಲೇ ಬೆಂಗಳೂರು ನಗರದ ವಾರ್ಡ್ ಮಟ್ಟದಲ್ಲಿ ನಮ್ಮ ಸಂಘಟನೆ ಸದೃಢವಾಗಿದೆ,ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಈಗಾಗಲೇ ಹಲವು ವರ್ಷಗಳಿಂದ ಕಾರ್ಯೋನ್ಮುಖರಾಗಿ ಜನತೆಯ ಅಶೋತ್ತರಗಳಿಗೆ ಸ್ಪಂದಿಸುತ್ತಿದ್ದಾರೆ. ನಗರದ ಅನೇಕ ಸಾಮಾಜಿಕ ಕಾರ್ಯಕರ್ತರು ಕೂಡಾ ಪಕ್ಷದೊಂದಿಗೆ ಜೋಡಿಸಿಕೊಳ್ಳುತ್ತಿದ್ದಾರೆ. ಮುಂಬರುವ ಪಾಲಿಕೆಗಳ ಚುನಾವಣೆಯಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಧಿಕಾರ ಪಡೆಯುವ ಮೂಲಕ ಬೆಂಗಳೂರು ನಗರದ ಆಮೂಲಾಗ್ರ ಸುಧಾರಣೆಯನ್ನು ಮಾಡುವುದೇ ನಮ್ಮ ಹೆಗ್ಗುರಿ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಿಕಾಂತರಾವ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹವಾನಿ, ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ, ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
