ಭ್ರಷ್ಟಾಚಾರ ಮುಕ್ತ- ಪಾರದರ್ಶಕ ಆಯ್ಕೆಗೆಬ್ಯಾಂಕಿಂಗ್ ಉದ್ಯೋಗ ಬೆಸ್ಟ್:ಕಲ್ಯಾಣ್

ಮೈಸೂರು: ಪ್ರಸ್ತುತ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗವು ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಯ್ಕೆಗೆ ದೇಶದಲ್ಲೇ ಹೆಸರಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಕಲ್ಯಾಣ್ ಕುಮಾರ್ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಬ್ಯಾಂಕಿಂಗ್ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ 50 ದಿನಗಳ ಕಾಲ ಏರ್ಪಡಿಸಿರುವ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಸರ್ಕಾರಿ ಉದ್ಯೋಗಗಳ ಅಯ್ಕೆ ಪ್ರಕ್ರಿಯೆಯು ಹಲವಾರು ವಿವಾದಗಳಿಗೆ ಒಳಗಾಗಿ ನಾಲೈದು ವರ್ಷಗಳು ಹಿಡಿಯುತ್ತಿವೆ. ಆದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೇವಲ ಆರು ತಿಂಗಳೊಳಗಾಗಿ ಅರ್ಜಿಯಿಂದ ಆಯ್ಕೆ ಪ್ರಕ್ರಿಯೆ ಮುಗಿದಿರುತ್ತದೆ, ಬ್ಯಾಂಕಿಂಗ್ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳಿಗೆ ಅತ್ಯುತ್ತಮ ಸಂಬಳ ಮತ್ತು ಇತರೆ ಆಕರ್ಷಕ ಭತ್ಯೆಗಳಿರುವುದರಿಂದ ಗೌರವಯುತ ಜೀವನ ನಡೆಸಲು ಸಾಧ್ಯವಿದೆ ಎಂದು ತಿಳಿಸಿದರು.

ಕರ್ನಾಟಕದ ಬಹುತೇಕ ಬ್ಯಾಂಕುಗಳಲ್ಲಿ ಉತ್ತರ ಭಾರತದವರೇ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ನಮ್ಮ ಕನ್ನಡಿಗರಲ್ಲಿ ಈ ಕುರಿತು ತಿಳುವಳಿಕೆ ಇಲ್ಲ, ಜೊತೆಗೆ ಬ್ಯಾಂಕ್ ಪರೀಕ್ಷೆಗಳು ಕಷ್ಟ ಎನ್ನುವ ತಪ್ಪು ಮನೋಭಾವ ಇದಕ್ಕೆ ಕಾರಣ. ಇತ್ತೀಚೆಗೆ ಕರ್ನಾಟಕ ಸರ್ಕಾರ ಬ್ಯಾಂಕಿಂಗ್ ಮತ್ತು ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಕೇಂದ್ರದ ಮೇಲೆ ಒತ್ತಡ ಹೇರಿ ಸಫಲರಾಗಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ವಿದ್ಯಾರ್ಥಿ ಜೀವನದಲ್ಲಿ 15 ವರ್ಷ ಓದಿದವರು ಕೇವಲ 6 ತಿಂಗಳು ಛಲಬಿಡದೆ ನಿರಂತರ ಅಧ್ಯಯನ ಮಾಡಿದರೆ, ನಿಮ್ಮ ಜೀವನ ಕಟ್ಟಿಕೊಂಡು, ಮನೆ ಮಂದಿ ಮತ್ತು ನಂಬಿದವರ ಬದುಕನ್ನು ಕಟ್ಟಿಕೊಳ್ಳಲು ನೆರವಾಗಬಹುದು ಎಂದು ಸಲಹೆ ನೀಡಿದರು.

ಇಂದಿನ ಪೋಷಕರು ಮಕ್ಕಳಿಗೆ ಕಷ್ಟಗಳನ್ನು ತೋರಿಸಿ ಬೆಳೆಸಿದರೆ ಮಾತ್ರ ಅವರ ಅಭಿವೃದ್ಧಿ ಸಾಧ್ಯ. ಆದರೆ ಇಂದಿನ ಪೋಷಕರು ಇದನ್ನು ಮಾಡುತ್ತಿಲ್ಲ. ಹೀಗಾಗಿ ಯುವ ಸಮುದಾಯ ದಾರಿ ತಪ್ಪುತ್ತಿದೆ ಎಂದು ಕಲ್ಯಾಣ್ ಕುಮಾರ್ ವುಷಾದಿಸಿದರು.

ಕರ್ನಾಟಕ ಸರ್ಕಾರದ ಸೂಪರ್‌ ಟೈಮ್ಸ್ ಸ್ಕೆಲ್ ಕೆಎಎಸ್ ಅಧಿಕಾರಿ, ರಾಜ್ಯ ಪುರಾತತ್ವ ವಸ್ತು ಸಂಗ್ರಾಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ಎ. ದೇವರಾಜು ಮಾತನಾಡಿ ಕರಾಮುವಿ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗೆ ನೀವು ಸೇರಿದರೆ ಅರ್ಧ ಯಶಸ್ಸು ಪಡೆದಂತೆಯೇ, ಅಸಂಖ್ಯಾತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಜೀವನ ರೂಪಿಸಿಕೊಂಡಿದ್ದಾರೆ.ಸಿದ್ಧತೆಯ ಹಾದಿ ಜಟಿಲವಿದ್ದರೂ ಗುರಿ ತಲುಪಬೇಕು ಎಂದು ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರು, ಕೆ.ಜಿ. ಕೊಪ್ಪಲ್ ಗಣೇಶ್, ಸಹಾಯಕ ಪ್ರಾಧ್ಯಾಪಕ ಡಾ.ಬೀರಪ್ಪ, ಡಾ. ನಾಗೇಶ್, ಸ್ಟುಡಿಯೋ ನಿರ್ದೇಶಕ ಸಿದ್ದೇಗೌಡ ಮತ್ತಿತರರು ಹಾಜರಿದ್ದರು.