ಬೆಂಗಳೂರು: ಕಬ್ಬು ಬೆಳೆಗಾರರ ಹೋರಾಟಕ್ಕೆ
ಆಮ್ ಆದ್ಮಿ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರಕಟಿಸಿದ್ದಾರೆ.
ಕೇಂದ್ರ ಸರ್ಕಾರವು ಕಬ್ಬು ಬೆಳೆಗಾರರಿಗೆ ನಿಗದಿ ಮಾಡಿರುವ 3,550 ರೂ.ಗಳ ಎಫ್. ಆರ್. ಪಿ ದರವನ್ನು ನೀಡಲು ಹಿಂಜರಿಯುತ್ತಿರುವ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಮಾಲೀಕರ ಕ್ರಮವನ್ನು ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆ ಮಾಲೀಕರುಗಳ ಪರವಾದ ಧೋರಣೆಯನ್ನು ನಮ್ಮ ಪಕ್ಷ ಸಂಪೂರ್ಣ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಈಗಾಗಲೇ ಘೋಷಿಸಿರುವ ಎಫ್‌ಆರ್‌ಪಿ ದರವು ಅವೈಜ್ಞಾನಿಕವಾಗಿದೆ,ಇದು ಕಬ್ಬು ಬೆಳೆದಿರುವ ರೈತರಿಗೆ ಸಾಕಷ್ಟು ನಷ್ಟವಾಗುತ್ತದೆ. ಇದನ್ನು ಪರಿಷ್ಕರಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಆದರೆ ರಾಜ್ಯದ ಕಾರ್ಖಾನೆ ಮಾಲೀಕರುಗಳೆಲ್ಲರೂ ಮೂರು ಪಕ್ಷಗಳ ಪ್ರಮುಖರು ಮಂತ್ರಿಗಳು, ಶಾಸಕರು, ಸಂಸದರುಗಳೇ ಆಗಿದ್ದಾರೆ. ಇವರ ಒತ್ತಡಕ್ಕೆ ಸಂಪೂರ್ಣ ಶರಣಾಗಿರುವ ರಾಜ್ಯ ಸರ್ಕಾರವು ಕೇಂದ್ರ ನಿಗದಿಪಡಿಸಿರುವ ದರವನ್ನು ಪರಿಷ್ಕರಿಸಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಕೇಂದ್ರವು ನಿಗದಿಪಡಿಸಿರುವ ದರ ಸಹ ನೀಡಲು ಒಪ್ಪಿಕೊಳ್ಳದ ಮಾಲೀಕರುಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ದುರುಳ ನೀತಿಯನ್ನು ಆಮ್ ಆದ್ಮಿ ಪಕ್ಷವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮುಖ್ಯ ಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳಾದಿಯಾಗಿ ಸಕ್ಕರೆ ಸಚಿವರು ಹಾಗೂ ಕಬ್ಬು ನಿಯಂತ್ರಣ ಪ್ರಾಧಿಕಾರ ಸಂಪೂರ್ಣ ಕಾರ್ಖಾನೆಗಳ ಮಾಲೀಕರುಗಳ ಪರವಾದ ಧೋರಣೆಯನ್ನು ತಳೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನಾಚಿಕೆ ಇಲ್ಲದ ರಾಜ್ಯದ ಬಿಜೆಪಿ ನಾಯಕರುಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡವನ್ನು ತರದೆ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿರುವುದು ಕೇವಲ ಪ್ರಚಾರಕ್ಕಾಗಿ ಎಂದು ಮುಖ್ಯಮಂತ್ರಿ ಚಂದ್ರು ಟೀಕಿಸಿದರು.
ಮಹಾರಾಷ್ಟ್ರ, ತಮಿಳುನಾಡು ರಾಜ್ಯದ ಕಾರ್ಖಾನೆಗಳು ಕೇಂದ್ರದ ಎಫ್ ಆರ್ ಪಿ ದರದಲ್ಲಿ ಲಕ್ಷಾಂತರ ಟನ್ ಬೆಳೆದಿರುವ ಕಬ್ಬನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೂ ಸಹ ನಷ್ಟವಾಗುತ್ತಿದೆ. ಆಮ್ ಆದ್ಮಿ ಪಕ್ಷವು ಜಯ ಸಿಕ್ಕುವವರೆಗೂ ರೈತರ ಜೊತೆಗಿದ್ದು ಅವರ ಹೋರಾಟದಲ್ಲಿ ಸಂಪೂರ್ಣ ಭಾಗವಹಿಸುತ್ತೇವೆ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
