ಕೊಳಚೆ ನೀರು ರಸ್ತೆಗೆ ಹರಿಯ ಬಿಡುತ್ತಿರುವ ಹೋಟೆಲ್ ಲೈಸನ್ಸ್ ರದ್ದುಪಡಿಸಲು ಆಗ್ರಹ

Spread the love

ಹುಣಸೂರು: ಹೋಟೇಲ್‌ನಿಂದ ತ್ಯಾಜ್ಯ ನೀರು ರಸ್ತೆಗೆ ಬಿಟ್ಟಿರುವ ಹೋಟೇಲ್ ಮಾಲೀಕನ ವಿರುದ್ಧ ಕ್ರಮ ಕೈಗೊಂಡು ಲೈಸೆನ್ಸ್ ರದ್ದುಪಡಿಸಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾ.ಅಧ್ಯಕ್ಷ ಚೆಲುವರಾಜು ಆಗ್ರಹಿಸಿದ್ದಾರೆ.

ಈ ಕುರಿತು ನಗರಸಭಾ ಆಯುಕ್ತರಿಗೆ ಅವರು ಪತ್ರ ಬರೆದಿದ್ದಾರೆ.

ಹುಣಸೂರು ನಗರದ ಬೈಪಾಸ್ ರಸ್ತೆಯಲ್ಲಿರುವ ಡಿ. ದೇವರಾಜ ಅರಸು ಅವರ ಪ್ರತಿಮೆ ಹಿಂಭಾಗದಲ್ಲಿ ಚೆಟಾಯಿಸ್ ಫ್ಯಾಮಿಲಿ ರೆಸ್ಟೋರೆಂಟ್ ಎಂಬ ಹೋಟೆಲನ್ನು ಇತ್ತೀಚೆಗೆ‌ ತೆರೆಯಲಾಗಿದೆ.ಅದು ಸರಿ. ಆದರೆ ಈ ಹೋಟೇಲಿನಿಂದ ಬರುವ ತ್ಯಾಜ್ಯ ನೀರು ಚರಂಡಿಗೆ ಹೋಗದೆ ರಸ್ತೆಯ ಮೇಲೆಯೇ ಹರಿಯುತ್ತಿದೆ ಎಂದು ಚೆಲುವರಾಜು ಆರೋಪಿಸಿದ್ದಾರೆ‌.

ಇದರಿಂದಾಗಿ ರಸ್ತೆಯೆಲ್ಲಾ ಗಬ್ಬು ನಾರುತ್ತಿದೆ. ಬೆಳಗಿನ ಸಮಯದಲ್ಲಿ ವಾಯುವಿಹಾರಕ್ಕೆ ಹೋಗುವ ಜನರಿಗಂತೂ ಈ ಗಬ್ಬು ವಾಸನೆಯಿಂದ ತಿರುಗಾಡುವುದೇ ಬಹಳ ಕಷ್ಟವಾಗಿದೆ.

ಸಾವಿರಾರು ಜನ ಸಾರ್ವಜನಿಕರು, ಶಾಲಾ ಮಕ್ಕಳು, ವಾಹನಗಳು ಓಡಾಡುವ ರಸ್ತೆಯಲ್ಲಿ ವಾಹನಗಳು ರಭಸದಿಂದ ಓಡಾಡುವ ಸಂದರ್ಭದಲ್ಲಿ ಈ ಕೊಳಕು ನೀರು ಮಕ್ಕಳು ಸಾರ್ವಜನಿಕರಿಗೆ ಎರಚಿ ಬಹಳ ಸಮಸ್ಯೆಯಾಗುತ್ತಿದೆ ಎಂದು ಚೆಲುವರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹೊಟೇಲ್ ಪಕ್ಕದಲ್ಲಿಯೇ ಟ್ರ್ಯಾಕ್ಟರ್ ಶೋರೂಮ್ ಹಾಗೂ ಅಂಗಡಿಗಳು ಇದ್ದು, ಇವರಿಗೂ ಈ ಗಬ್ಬು ವಾಸನೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಾನೇ ಖುದ್ದಾಗಿ ಪರಿಶೀಲಿಸಿ ಹೋಟೇಲ್‌ನವರ ಗಮನಕ್ಕೆ ತಂದರೆ ನಾವು ಲೈಸೆನ್ಸ್ ತೆಗೆದುಕೊಂಡು ಹೋಟೇಲ್ ಉದ್ಯಮ ನಡೆಸುತ್ತಿದ್ದೇವೆ. ಚರಂಡಿ ಸರಿಪಡಿಸುವುದು ನಗರಸಭೆಯವರ ಕರ್ತವ್ಯ ಎಂದು ನನಗೆ ಧಮ್ಮಿ ಹಾಕುತ್ತಿದ್ದಾರೆ ಎಂದು ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಇವರು ಹೋಟೇಲ್ ಉದ್ಯಮ ನಡೆಸಲು ಲೈಸೆನ್ಸ್ ನೀಡುವುದಾದರೆ ಹುಣಸೂರು ನಗರಾದ್ಯಂತ ಗಬ್ಬು ನಾರುವುದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಕೂಡಲೇ ನಗರಸಭೆಯ ಆಯುಕ್ತರು ಹಾಗೂ ಹೆಲ್ತ್ ಇನ್ಸ್‌ಪೆಕ್ಟರ್, ಪರಿಸರ ನಿಯಂತ್ರಣಾಧಿಕಾರಿಗಳು, ಸಿಬ್ಬಂಧಿಗಳು ಪರಿಶೀಲಿಸಿ ಚೆಟಾಯಿಸ್ ಹೋಟೇಲ್ ಉದ್ಯಮದ ಲೈಸೆನ್ಸ್ ಮುಟ್ಟುಗೋಲು ಹಾಕಿಕೊಂಡು ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು, ಕೂಡಲೇ ಚರಂಡಿ ವ್ಯವಸ್ಥೆ ಸರಿಪಡಿಸಿ ನಾಗರೀಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಚೆಲುವರಾಜು ಒತ್ತಾಯಿಸಿದ್ದಾರೆ.