ಭದ್ರತೆ ನೆಪದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ ತೊಂದರೆ ಕೊಡಬೇಡಿ- ತೇಜಸ್ವಿ ಮನವಿ

Spread the love

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲು ಪೊಲೀಸ್ ಅಧಿಕಾರಿಗಳು ಕೆಲ ಕಠಿಣ ಕ್ರಮ ಕೈಗೊಂಡಿರುವುದನ್ನು ಕನ್ನಡ ಚಳವಳಿ ಹೋರಾಟಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಸ್ವಾಗತಿಸಿದ್ದಾರೆ.

ಮೈಸೂರಿನಲ್ಲಿ ಕೆಲ ದಿನಗಳ ಹಿಂದೆ ಗ್ಯಾಂಗ್ ವಾರ್ ನಲ್ಲಿ ವ್ಯಕ್ತಿ ಒಬ್ಬನನ್ನು ಮಾರಕಾಸ್ತ್ರ ಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು ಮತ್ತು ಅದಾದ ಎರಡು ದಿನಗಳಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಕೊಲೆ ನಡೆದಿತ್ತು.

ಇದಾದ ಮೇಲೆ ಪೋಲಿಸ್ ಇಲಾಖೆ ನಗರದಾದ್ಯಂತ ಬಿಗಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾತ್ರಿ ೧೦, ೧೦:೩೦ ರ ನಂತರ ಯಾವುದೇ ಸ್ಥಳದಲ್ಲಿ ಗುಂಪು ಗುಂಪಾಗಿ ಜನ ಸೇರಿದಂತೆ ಕ್ರಮ ಕೈಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ‌ ಎಂದು ತೇಜಸ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ ಭದ್ರತೆ ಹೆಸರಲ್ಲಿ ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ಮತ್ತು ಹೋಟೆಲ್ ನವರಿಗೆ ತೊಂದರೆ ಉಂಟಾಗುತ್ತಿದೆ ಎಂದು ಅನೇಕ ವ್ಯಾಪಾರಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ರಸ್ತೆ ಬದಿ ವ್ಯಾಪಾರ ಮಾಡಿಯೇ ಬಹಳ ಮಂದಿ ಬದುಕು ಕಟ್ಟಿಕೊಂಡಿದ್ದಾರೆ.ಅಂತವರ ಮೇಲೆ ಕ್ರಮ ತೆಗೆದುಕೊಳ್ಳುವುದು ಸರಿಯಲ್ಲ.ಬೀದಿ ಬದಿ ವ್ಯಾಪಾರ ಮಾಡುವವರು ಮತ್ತು ಹೋಟೆಲ್ ನವರಿಗೆ ರಿಯಾಯಿತಿ ನೀಡಬೇಕು, ಒತ್ತಾಯ ಪೂರ್ವಕವಾಗಿ ಕ್ರಮ ಕೈಗೊಳ್ಳ‌ಬಾರದೆಂದು ತೇಜಸ್ವಿ ನಾಗಲಿಂಗಸ್ವಾಮಿ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ.

ಬಾರ್ ಗಳು, ನಿರ್ಜನ ಪ್ರದೇಶದಲ್ಲಿ ಗುಂಪುಗಟ್ಟುವ ಯುವಕರ ಮೇಲೆ ನಿರ್ಬಂಧ ಹೇರುವುದರಿಂದ ಅಪರಾಧ ಪ್ರಕರಣಗಳನ್ನು ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.

ಪೋಲಿಸ್ ಇಲಾಖೆಯ ಕಟ್ಟು ನಿಟ್ಟಿನ ಕ್ರಮ ದಿಂದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಹೋಟೆಲ್ ವ್ಯಾಪಾರಸ್ಥರಿಗೆ ತೊಂದರೆ ಯಾಗದಂತೆ ಕ್ರಮ ವಹಿಸಬೇಕು ಎಂದು ತೇಜಸ್ವಿ ನಾಗಲಿಂಗಸ್ವಾಮಿ ಕೋರಿದ್ದಾರೆ.