ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಗೆ ಅನಸ್ತೇಶಿಯಾ ನೀಡಿ ಕೊಂದು, ಸಹಜ ಸಾವು ಎಂದು ಬಿಂಬಿಸಿದ್ದ
ಡಾಕ್ಟರ್ ಮಹಾಶಯ ಈಗ ಕಂಬಿ ಎಣಿಸುತ್ತಿದ್ದಾರೆ
ವಿಕ್ಟೋರಿಯಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಮಹೇಂದ್ರ ರೆಡ್ಡಿಯನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುನೇನಕೊಳಲು ಅಯ್ಯಪ್ಪಸ್ವಾಮಿ ಲೇಔಟ್ ನಿವಾಸಿ ಡಾ.ಕೃತಿಕಾ ರೆಡ್ಡಿ(30) ಅವರು ಕೊಲೆಯಾದ ನತದೃಷ್ಟೆ.
ಮೃತರ ತಂದೆ ಕೆ.ಮುನಿರೆಡ್ಡಿ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಈಕೆಯ ಪತಿ ವರ್ತೂರಿನ ಗುಂಜೂರು ನಿವಾಸಿ ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಲಾಗಿದೆ.
ಪ್ರಕರಣ ಬಹಳ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಆರು ತಿಂಗಳ ಹಿಂದೆ ಪತ್ನಿ ಕೃತಿಕಾ ರೆಡ್ಡಿ ಅವರಿಗೆ ಅನಸ್ತೇಶಿಯಾ ಕೊಟ್ಟು ಕೊಲೆ ಮಾಡಿ ಏನೂ ಆಗೇ ಇಲ್ಲಾ,ಸಹಜ ಸಾವು ಎಂದು ಬಿಂಬಿಸಿದ್ದ.
ಇದೀಗ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿ ಆರೋಪಿ ಮಹೇಂದ್ರ ರೆಡ್ಡಿಯನ್ನು ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಬಂಧಿಸಲಾಗಿದೆ.
2024ರ ಮೇ 24ರಂದು ಮಹೇಂದ್ರ ರೆಡ್ಡಿ ಮತ್ತು ಕೃತಿಕಾ ರೆಡ್ಡಿ ಹಿರಿಯರ ಸಮ್ಮುಖದಲ್ಲೇ ಮದುವೆಯಾಗಿದ್ದರು. ಕೃತಿಕಾ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರಾಗಿದ್ದರು, ಮಹೇಂದ್ರ ರೆಡ್ಡಿ ಅದೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ಮಧ್ಯೆ ಕೃತಿಕಾ ರೆಡ್ಡಿ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ, ಪತಿಗೆ ಗೊತ್ತಾಗದಂತೆ ಔಷಧ ತೆಗೆದುಕೊಳ್ಳುತ್ತಿದ್ದರು.
ಮದುವೆಯಾದ ಕೆಲ ತಿಂಗಳ ಬಳಿಕ ಅವರ ಆರೋಗ್ಯ ಸಮಸ್ಯೆ ಹೆಚ್ಚಾಗಿತ್ತು. ಹೀಗಾಗಿ ಅವರು ತವರು ಮನೆಗೆ ಬಂದಿದ್ದರು.
ಅಲ್ಲಿಗೆ ಹೋಗಿ ಪತ್ನಿಗೆ ಆರೋಪಿಯೇ ಚಿಕಿತ್ಸೆ ನೀಡುತ್ತಿದ್ದರು. 2024ರ ಏಪ‍್ರಿಲ್ 23ರಂದು ಪತ್ನಿ ಕೃತಿಕಾಗೆ ಹೆಚ್ಚುವರಿ ಅನಸ್ತೇಶಿಯಾ ನೀಡಿದ್ದು, ಅವರು ಕೋಮಾ ಸ್ಥಿತಿ ತಲುಪಿದ್ದಾರೆ.
ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಅಲ್ಲಿ ಮೃತಪಟ್ಟಿದ್ದರು. ಹೀಗಾಗಿ ಮೃತರ ಪೋಷಕರು ಯಾವುದೇ ಅನುಮಾನ ಇಲ್ಲ ಎಂದು ದೂರು ನೀಡಿದ್ದರಿಂದ ಯುಡಿಆರ್ ದಾಖಲಾಗಿತ್ತು.
ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಜತೆಗೆ ಘಟನಾ ಸ್ಥಳದಲ್ಲಿ ದೊರೆತಿದ್ದ ಕೆನಾಲ್, ಇಂಜೆಕ್ಷನ್‌ಗಳು ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಅಲ್ಲದೇ, ಮೃತದೇಹದ ಕೆಲ ಮಾದರಿಗಳನ್ನು ಎಫ್ಎಸ್ಎಲ್‌ಗೆ ಕಳಿಸಲಾಗಿತ್ತು. ಎಫ್‌ಎಸ್‌ಎಲ್ ವರದಿಯಲ್ಲಿ ಅನಸ್ತೇಶಿಯಾ ಅಂಶಗಳು ಹೆಚ್ಚಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ದೃಢವಾಗಿತ್ತು.
ಹಾಗಾಗಿ ಕೃತಿಕಾ ಅವರ ತಂದೆಯಿಂದ ದೂರು ಪಡೆದು, ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹೇಂದ್ರ ರೆಡ್ಡಿ ಅವರನ್ನು ಬಂಧಿಸಿ, ಒಂಬತ್ತು ದಿನ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಯ ನಂತರ ಕೃತಿಕಾಳನ್ನು ಅಳಿಯ ನಿರ್ಲಕ್ಷಿಸಲು ಪ್ರಾರಂಭಿಸಿದ್ದ. ಮನೆಯ ಸಣ್ಣ ನಿರ್ಧಾರಗಳಿಗೂ ತನ್ನ ತಂದೆಯ ಒಪ್ಪಿಗೆಯನ್ನು ಪಡೆಯಬೇಕೆಂದು ಮತ್ತು ವೈಯಕ್ತಿಕ ಖರ್ಚುಗಳನ್ನು ಆಕೆಯೇ ಭರಿಸಬೇಕೆಂದು ಒತ್ತಾಯಿಸುತ್ತಿದ್ದ ಎಂದು ಕೃತಿಕಾ ತಂದೆ ದೂರಿದ್ದಾರೆ.
ಅಳಿಯ ದೊಡ್ಡ ಆಸ್ಪತ್ರೆಯ ನಿರ್ಮಾಣಕ್ಕೆ ಹಣಕಾಸು ನೆರವು ಒದಗಿಸುವಂತೆ ಕೇಳಿದ್ದ. ಆಸ್ಪತ್ರೆ ನಿರ್ಮಾಣಕ್ಕೆ ಬೇಕಾಗುವಷ್ಟು ಹಣ ಇಲ್ಲ ಎಂದು ಹೇಳಿ ವೈದ್ಯಕೀಯ ಅಭ್ಯಾಸಕ್ಕಾಗಿ ಮಾರತಹಳ್ಳಿಯಲ್ಲಿರುವ ಸ್ವಂತ ಕಟ್ಟಡದಲ್ಲಿ ಕ್ಲಿನಿಕ್ ಮಾಡಿಕೊಟ್ಟಿದ್ದೇನೆ ಎಂದು ಮುನಿರೆಡ್ಡಿ ಆರೋಪಿಸಿದ್ದಾರೆ.