ಮೈಸೂರು: ಮಾರಿಷಸ್ ನಲ್ಲಿ ಜೆಎಸ್ಎಸ್ ವೈದ್ಯಕೀಯ ಕಾಲೇಜನ್ನು ಆರಂಭಿಸಲಾಗಿದೆ ಎಂದು ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಯವರು ತಿಳಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶ್ರೀಗಳು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಮಾರಿಷಸ್ ನಲ್ಲಿ ಮೆಡಿಕಲ್ ಕಾಲೇಜ್ ಆರಂಭಿಸುವ ಮೂಲಕ ಜೆಎಸ್ಎಸ್ ಮಹಾವಿದ್ಯಾಪೀಠ ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಹೆಜ್ಜೆಯನಿಟ್ಟಂತಾಗಿದೆ ಎಂದು ತಿಳಿಸಿದರು.
ಮಾರೀಷಸ್ ನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ಎಂಬಿಬಿಎಸ್ ಕೋರ್ಸ್ ಪ್ರಾರಂಭಿಸಲು ಅಲ್ಲಿನ ಸರಕಾರದ ಹೈಯರ್ ಎಜುಕೇಶನ್ ಕಮಿಷನ್ ನಿಂದ ಅಂಗೀಕಾರ ದೊರೆತಿದೆ ಎಂದು ಶ್ರೀಗಳು ತಿಳಿಸಿದರು.
ಮಾರಿಷಸ್ ನ ವಕೋಯಾಸ್ ಉಪನಗರದ ಬೋನ್ ಟೇರ್ ನಲ್ಲಿ ಎಂಟು ಎಕರೆ ಪ್ರದೇಶದಲ್ಲಿ 14,689 ಚದರ ಮೀಟರ್ ವಿಸ್ತೀರ್ಣದಲ್ಲಿ ಅಕಾಡೆಮಿಯ ಕಟ್ಟಡವನ್ನು ನಿರ್ಮಿಸಲಾಗಿದೆ. ಇಲ್ಲಿ ಅಂತರಾಷ್ಟ್ರೀಯ ಮಟ್ಟದ ತರಗತಿಗಳು, ಪ್ರಯೋಗಾಲಯಗಳು ಮತ್ತು ವಸತಿ ಸೌಲಭ್ಯಗಳ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಶ್ರೀಗಳು ಹೇಳಿದರು.
ಈ ಮೆಡಿಕಲ್ ಕಾಲೇಜಿನ ಆರಂಭದಿಂದ ಮಾರಿಷಸ್, ಆಫ್ರಿಕಾ ಮತ್ತು ಏಷ್ಯಾ ಭಾಗದ ಆರೋಗ್ಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸುವ ಮೈಲಿಗೆಲ್ಲು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾರಿಷಸ್ ನ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಶ್ರಯದಲ್ಲಿ ಆರೋಗ್ಯ ವಿಜ್ಞಾನ ವಿಭಾಗ ಲೈಫ್ ಸೈನ್ಸ್ ವಿಭಾಗ ಹಾಗೂ ಮ್ಯಾನೇಜ್ಮೆಂಟ್ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸುತ್ತೂರು ಶ್ರೀಗಳು ಹೇಳಿದರು.
ಈ ನೂತನ ಕಾಲೇಜಿನ ಕ್ಯಾಂಪಸ್ ನಲ್ಲಿ ಅತ್ಯಾಧುನಿಕ ಪ್ರಯೋಗಾಲಯ, ಮ್ಯೂಸಿಯಂ, ವೈಫೈ ಸೌಲಭ್ಯ, ಸ್ಮಾರ್ಟ್ ಕ್ಲಾಸ್ ರೂಮ್, ಇ ಲರ್ನಿಂಗ್ ವೇದಿಕೆಗಳು, ವಿದ್ಯಾರ್ಥಿ ನಿಲಯ, ಕ್ರೀಡಾಂಗಣ ಮತ್ತು ವಿಶ್ರಾಂತಿ ಸೌಲಭ್ಯ, ಅಧ್ಯಾಪಕರು ಮತ್ತು ಸಂಶೋಧನಾ ಸಹಯೋಗಕ್ಕೆ ಪೂರಕವಾದ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಈ ನೂತನ ಮೆಡಿಕಲ್ ಕಾಲೇಜಿನಲ್ಲಿ ಮೊದಲನೆಯ ತಂಡದ ವಿದ್ಯಾರ್ಥಿಗಳ ಪ್ರವೇಶವನ್ನು ನವಂಬರ್ ತಿಂಗಳ ವೇಳೆಗೆ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಶುಲ್ಕದ ಬಗ್ಗೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ಬೇರೆ ಕಾಲೇಜಿಗೆ ಹೋಲಿಸಿಕೊಂಡರೆ ನೂತನ ಕಾಲೇಜಿನಲ್ಲಿ ಶುಲ್ಕ ಕಡಿಮೆ ಪ್ರಮಾಣದಲ್ಲಿ ಇರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಸುರೇಶ್, ಮಂಜುನಾಥ್, ಡಾ. ಬಸವಣ್ಣಪ್ಪ ಗೌಡ ಉಪಸ್ಥಿತರಿದ್ದರು.