ಮೈಸೂರು: ಕೂಗು ಮಾರಿಗಳಿರುವುದು ರಾಜ್ಯ ಸರ್ಕಾರದಲ್ಲಲ್ಲ, ನಿಜವಾದ ಕೂಗುಮಾರಿ ಪ್ರತಾಪ್ ಸಿಂಹ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕೂಗುಮಾರಿಗಳಿದ್ದಾರೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿರುವ ಸುಬ್ರಹ್ಮಣ್ಯ, ಮೈಸೂರು ದಸರಾಕ್ಕೆ ಮೊದಲ ಕೂಗುಮಾರಿನೇ ಪ್ರತಾಪ್ ಸಿಂಹ ಎಂದು ಕುಟುಕಿದ್ದಾರೆ.
ಭಾನು ಮುಷ್ತಾಕ್ ಅವರ ಯಾವುದೋ ಒಂದು ವಿಡಿಯೋ ತುಣುಕನ್ನು ಹಾಕಿ ಇಡೀ ಹಿಂದೂ ಮುಸ್ಲಿಂ ಬಾಂಧವರ ನಡುವೆ ಎತ್ತಿಕಟ್ಟುವ ಕೆಲಸ ಮಾಡಿದ್ದು ಇದೇ ಪ್ರತಾಪ್ ಸಿಂಹ. ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲೂ ಛೀಮಾರಿ ಹಾಕಿಸಿಕೊಂಡ್ರು, ಜನರ ಕಾಯಕ ಮಾಡುತ್ತಿರುವ ಸಿದ್ದರಾಮಯ್ಯ ನವರ ಜನಪರ ಕೆಲಸಗಳು ಪ್ರತಾಪ್ ಸಿಂಹ ಅವರಿಗೆ ಕಾಣುತ್ತಿಲ್ಲ ಹಾಗಾಗಿ ಪದೇ ಪದೇ ಮೈಸೂರಿನಲ್ಲಿ ತಾನು ಬದುಕಿದ್ದೇನೆ ಎಂಬುದನ್ನು ತೋರಿಸಲು ಟೀಕೆ ಮಾಡುತ್ತಿರುವ ನಿಜವಾದ ಕೂಗುಮಾರಿ ಕೆಲಸ ಮಾಡ್ತಿರೋದೇ ಪ್ರತಾಪ್ ಸಿಂಹ ಎಂದು ಕಿಡಿ ಕಾರಿದ್ದಾರೆ.
ಮೈಸೂರಿನಲ್ಲಿ ಬಲೂನ್ ಮಾರುವ ಬಾಲಕಿ ಮೇಲೆ ನಡೆದದ್ದು ಘೋರ ಕೃತ್ಯ, ಅದನ್ನ ಯಾರೂ ಸಹಿಸಲು ಸಾಧ್ಯವಿಲ್ಲ, ಕೃತ್ಯ ಎಸಗಿದ ಕಿಡಿಗೇಡಿಯನ್ನ ಗಲ್ಲಿಗೇರಿಸಬೇಕು ಎಂಬುದು ಕೂಡಾ ನಮ್ಮ ಒತ್ತಾಯ ವಾಗಿದೆ ಎಂದು ಸುಬ್ರಹ್ಮಣ್ಯ ಹೇಳಿದ್ದಾರೆ.
ಈ ಘಟನೆ ದಸರಾ ಮುಗಿದ ಮೇಲೆ ಆಗಿದೆ, ಇದನ್ನ ನಾಡಹಬ್ಬಕ್ಕೆ ಹೋಲಿಸಿ ಧಕ್ಕೆ ತರುವುದು ಸರಿಯಲ್ಲಾ, ಅಲ್ಲದೇ ಘಟನೆಗೆ ಸರ್ಕಾರವನ್ನ ಹೊಣೆ ಮಾಡುವುದು ಕೂಡಾ ಸರಿಯಲ್ಲ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಎನ್‌ಡಿಎ ಸರ್ಕಾರ ಇರುವ ಬಿಹಾರದಲ್ಲಿ, ಬಿಜೆಪಿ ಸರ್ಕಾರ ಇರುವ ಉತ್ತರ ಪ್ರದೇಶದಲ್ಲಿ ಪ್ರತಿದಿನ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ತಾಕತ್ತಿದ್ದರೆ ಹೋಗಿ ಯೋಗಿ ಅವರ ವಿರುದ್ಧ ಮಾತಾಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಈಗ ಬೊಬ್ಬೆ ಹೊಡೆಯುವ ಪ್ರತಾಪ್ ಸಿಂಹ ಸುಪ್ರೀಂ ಕೋರ್ಟ್ ಸಿಜೆಐ ಮೇಲೆ ಶೂ ಎಸೆದಾಗ ಏಕೆ ಸೊಲ್ಲೆತ್ತಲಿಲ್ಲ, ನಿಮ್ಮಿಂದ ಪಾಸ್ ಪಡೆದವರು ಪಾರ್ಲಿಮೆಂಟ್‌ನಲ್ಲಿ ಸ್ಮೋಕ್ ಬಾಂಬ್ ಹಾಕಿದ್ದರಲ್ಲಾ, ಆಗಲೂ ಏನೂ ಮಾತಾಡಲಿಲ್ಲ. ಮದ್ದೂರಲ್ಲಿ ಗಣೇಶ ಮೂರ್ತಿ ವಿಚಾರದಲ್ಲಿ ಗಲಾಟೆ ಆದಾಗ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರ ಮೇಲೆ ಈವರೆಗೆ ಮಾಡಿದ ಆರೋಪಗಳು ಫಲ ಕೊಡಲಿಲ್ಲ ಅದಕ್ಕಾಗಿ ಈಗ ಅವರ ಮಗನ ಮೇಲೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿಗಳಾಗಿ ಅಧಿಕಾರ ಪೂರೈಸಿದರೆ 2028ರಲ್ಲೂ ಕಾಂಗ್ರೆಸ್ ಪಟ್ಟಕ್ಕೇರಿಬಿಡುತ್ತೆ ಅನ್ನೋ ಭಯ ಕಾಡುತ್ತಿದೆಯೇನೊ ಅಲ್ಲದೇ ಬಿಜೆಪಿ ಅವಧಿಯಲ್ಲಿ ನಡೆಯುತ್ತಿದ್ದ ಪ್ರೈವೆಟ್ ಕ್ಲಬ್‌ಗಳನ್ನ ಸಿದ್ದರಾಮಯ್ಯ ಅವರು ಬಂದ್ ಮಾಡಿಸಿದ್ದಾರೆ. ಅದಕ್ಕಾಗಿ ಪ್ರತಾಪ್ ಸಿಂಹ ಸಿಎಂ ಮಗನ ಮೇಲೆ ನಿರಾಧಾರವಾಗಿ ಆರೋಪ ಮಾಡ್ತಿದ್ದಾರೆ. ದಾಖಲೆಗಳಿದ್ದರೆ, ಬಿಡುಗಡೆ ಮಾಡಲಿ, ಅದು ಬಿಟ್ಟು ಬೀದಿಯಲ್ಲಿ ಕೂಗುಮಾರಿ ಕೆಲಸ ಮಾಡೋದು ನಾಚಿಗೇಡು ಎಂದು ಸುಬ್ರಹ್ಮಣ್ಯ ಲೇವಡಿ ಮಾಡಿದ್ದಾರೆ,
ಇನ್ನು ನಳಪಾಕ್‌ನಲ್ಲಿ ಕಾಫಿ ಕುಡಿಯಲು, ಮೈಲಾರಿ ಹೊಟೇಲ್ ನಲ್ಲಿ ದೋಸೆ ತಿನ್ನಲು ಅಷ್ಟೇ ಪೊಲೀಸರ ಬಳಕೆ ಮಾಡ್ತಿದ್ದಾರೆ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಬ್ರಹ್ಮಣ್ಯ, ಪೊಲೀಸ್ ಭದ್ರತೆ ಕೊಡೋದು ಸಿದ್ದರಾಮಯ್ಯ ಅಂತ ಅಲ್ಲ, ಮುಖ್ಯಮಂತ್ರಿಗಳು ಎಂಬ ಕಾರಣಕ್ಕೆ.ಆ ಸ್ಥಾನದಲ್ಲಿ ಯಾರಿದ್ದರೂ ಅವರಿಗೆ ಸೂಕ್ತ ಭದ್ರತೆ ಕೊಟ್ಟೇ ಕೊಡ್ತಾರೆ. ಕಾರ್ಯಕ್ರಮ ನಿಮಿತ್ತ ಬಂದಾಗ ಊಟ, ತಿಂಡಿ ಮಾಡಲೇಬೇಕಲ್ಲವೇ? ಮೋದಿ ಅವರು ಮೈಸೂರಿನ ರ್‍ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾಗ ಎಷ್ಟು ಖರ್ಚಾಗಿತ್ತು? ಆಗ ಎಷ್ಟು ಜನ ಭದ್ರತೆಗೆ ಇದ್ದರು? ಇದ್ಯಾವುದು ತಲೆಯಲ್ಲಿ ನಿಮ್ಮ ತಲೆಯಲ್ಲಿ ಇಲ್ಲವೆ, ಮೋದಿ ಅವರನ್ನೂ ಹೀಗೆಯೆಡ ಪ್ರಶ್ನೆ ಮಾಡಲು ಧೈರ್ಯ ಇದೆಯೇ ಎಂದು ಬಿ ಸುಬ್ರಹ್ಮಣ್ಯ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.