ಪರಿಸರ ಸ್ನೇಹಿ ಸುರಕ್ಷಿತ ದೀಪಾವಳಿ ಆಚರಿಸಿ ಶ್ರೀರಾಮ ಗೆಳೆಯರ ಬಳಗದ ಮನವಿ

Spread the love

ಮೈಸೂರು: ಪಟಾಕಿಗಳನ್ನು ತ್ಯಜಿಸಿ, ಮನೆ ಮನೆಯಲ್ಲಿ ದೀಪಗಳನ್ನು ಬೆಳಗುವ ಮೂಲಕ ಪರಿಸರ ಸ್ನೇಹಿ ಮತ್ತು ಸುರಕ್ಷಿತ ದೀಪಾವಳಿ ಆಚರಣೆ ಮಾಡಬೇಕೆಂದು ಶ್ರೀರಾಮ ಗೆಳೆಯರ ಬಳಗದವರು ಮನವಿ ಮಾಡಿದರು.

ಶುಕ್ರವಾರ ಚಾಮುಂಡಿಪುರಂನಲ್ಲಿ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ವಾರ್ಡ್ ನಂಬರ್ 55ರಲ್ಲಿ ಮನೆ ಮನೆಗಳಿಗೆ ದೀಪ ನೀಡುವ ಮೂಲಕ ಪಟಾಕಿ ತ್ಯಜಿಸಿ ದೀಪ ಬೆಳಗಿಸಿ ಅಭಿಯಾನವನ್ನು ನಡೆಸಲಾಯಿತು

ಈ ವೇಳೆ ಅಧ್ಯಕ್ಷರಾದ ಸಿ ಸಂದೀಪ್ ಅವರು ಮಾತನಾಡಿ ಬೆಳಕಿನ ಹಬ್ಬವಾದ ದೀಪಾವಳಿಯು ನಮ್ಮೆಲ್ಲರ ಬಾಳಿನಲ್ಲಿ ಸಂತೋಷ, ಸಮೃದ್ಧಿ ಮತ್ತು ಹೊಸ ಬೆಳಕನ್ನು ತರಲಿ ಎಂದು ಹಾರೈಸಿದರು.

ಈ ಶುಭ ಸಂದರ್ಭದಲ್ಲಿ, ನಾವು ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಪ್ರಮುಖವಾದ ಮನವಿಯನ್ನು ಮಾಡುತ್ತಿದ್ದೇವೆ.
ಪ್ರತಿ ವರ್ಷ ಪಟಾಕಿಗಳನ್ನು ಸಿಡಿಸುವುದರಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ.

ಈ ರೀತಿ ಮಾಲಿನ್ಯದಿಂದ ಮಕ್ಕಳು, ವೃದ್ಧರು, ಗರ್ಭಿಣಿಯರು ಮತ್ತು ಉಸಿರಾಟದ ಸಮಸ್ಯೆ ಇರುವವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ತಿಳಿಹೇಳಿದರು.

ಆದುದರಿಂದ ಈ ಬಾರಿ ನಾವು ಎಲ್ಲರೂ ಪಟಾಕಿಗಳನ್ನು ಸಾಧ್ಯವಾದಷ್ಟು ತ್ಯಜಿಸಿ, ಹಬ್ಬದ ಮೂಲ ಆಶಯವಾದ ದೀಪಗಳ ಮಹತ್ವವನ್ನು ಸಾರುವ ಮೂಲಕ ದೀಪಾವಳಿಯನ್ನು ಆಚರಿಸಲು ನಿರ್ಧರಿಸಬೇಕು ಎಂದು ಸಂದೀಪ್ ಕರೆ ನೀಡಿದರು.

ಪಟಾಕಿ ಸಿಡಿಸುವ ಬದಲಿಗೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೇರಿ ಸಾಂಸ್ಕೃತಿಕ ಚಟುವಟಿಕೆಗಳು, ರಂಗೋಲಿ ಸ್ಪರ್ಧೆಗಳು ಅಥವಾ ಸಿಹಿ ಹಂಚುವ ಕಾರ್ಯಕ್ರಮಗಳನ್ನು ಆಯೋಜಿಸಿ, ಹಬ್ಬದ ಸಡಗರವನ್ನು ಹೆಚ್ಚಿಸಿ.
ಹಸಿರು ದೀಪಾವಳಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.

ನಾವು ಪಟಾಕಿಗಳನ್ನು ತ್ಯಜಿಸುವುದರಿಂದ ಪರಿಸರ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಮೂಲಕ ಪ್ರತಿಯೊಬ್ಬರೂ ಹಸಿರು ಮತ್ತು ಆರೋಗ್ಯಕರ ದೀಪಾವಳಿಗೆ ಕೊಡುಗೆ ನೀಡೋಣ ಎಂದು ತಿಳಿಸಿದರು

ನಗರ ಪಾಲಿಕೆ ಮಾಜಿ ಸದಸ್ಯೆ ವಿದ್ಯಾ ಅರಸ್ ಮಾತನಾಡುತ್ತಾ ಮನೆ ಮನೆಗೆ ದೀಪ ಬೆಳಗಿಸಿ ನಿಮ್ಮ ಮನೆಯ ಸುತ್ತಮುತ್ತ, ಕಿಟಕಿ, ಬಾಗಿಲು ಮತ್ತು ಹೊರಭಾಗದಲ್ಲಿ ಮಣ್ಣಿನ ದೀಪಗಳು (ಎಣ್ಣೆ ದೀಪಗಳು) ಮತ್ತು ಪರಿಸರ ಸ್ನೇಹಿ ದೀಪಾಲಂಕಾರಗಳನ್ನು ಮಾಡಿ, ನಿಮ್ಮ ಮನೆ ಮತ್ತು ಪರಿಸರವನ್ನು ಪ್ರಕಾಶಮಾನವಾಗಿ ಬೆಳಗಿಸಿ ಎಂದು ಸಲಹೆ ನೀಡಿದರು.

ದೀಪಗಳು ಕತ್ತಲೆಯನ್ನು ಓಡಿಸಿ, ನಮ್ಮ ಮನಸ್ಸಿನಲ್ಲಿ ಜ್ಞಾನ ಮತ್ತು ಸಕಾರಾತ್ಮಕತೆಯನ್ನು ತುಂಬುತ್ತವೆ ಎಂದು ತಿಳಿಸಿದರು.

ಈ ಅಭಿಯಾನದಲ್ಲಿ ಸೌಭಾಗ್ಯಮೂರ್ತಿ, ಬಸವ ಬಳಗ ಚಾಮುಂಡಿಪುರಂ ಸಂಘದ ಗೌರವಾಧ್ಯಕ್ಷರಾದ ಅಂಬಳೆ ಶಿವಣ್ಣ, ಬಿಜೆಪಿ ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಕಾರ್ಯದರ್ಶಿ ಡಿ ಸಿ ಮಂಜುಳ, ಕೆ ಆರ್ ಕ್ಷೇತ್ರದ ಕಾರ್ಯದರ್ಶಿ ಲತಾ, ಮುಖಂಡರಾದ ಲಲಿತಾಂಬ, ವಿಜಯ, ಕಾವ್ಯ, ಬಸವರಾಜು, ಪ್ರಭುಶಂಕರ್, ಗಿರೀಶ್, ತಿಪೇಶ್ , ಕಿರಣ್, ಪವನ್, ನಾಗರಾಜ್, ದೀಪಕ್, ಸಂದೇಶ್, ಧನುಷ್, ಸುರೇಶ್, ಪಾರ್ವತಿ, ಗಾಯತ್ರಿ, ಮಧುರ, ರಿಂಕು ಮುಂತಾದವರು ಪಾಲ್ಗೊಂಡಿದ್ದರು.