ಬೆಂಗಳೂರು: ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ, ಹಾಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪರಿಸರ, ಅರಣ್ಯ ಸಂರಕ್ಷಕರಿಗೆ ಮುಖ್ಯಮಂತ್ರಿ ಪದಕ ವಿತರಿಸಿ ಸಿಎಂ ಮಾತನಾಡಿದರು.
ಸಾಕಿದ ಹಸುವನ್ನು ತಿಂದಿದೆ ಎಂಬ ಕಾರಣಕ್ಕೆ ಹುಲಿಗಳಿಗೆ ವಿಷ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ. ಯಾರೇ ಅರಣ್ಯ ಮತ್ತು ಪ್ರಾಣಿ ಸಂಪತ್ತನ್ನು ಕೊಲ್ಲಲು ಮುಂದಾದರೆ ಅವರು ಎಷ್ಟೇ ದೊಡ್ಡವರಾಗಿದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದರು.
ಅರಣ್ಯ ಪರಿಸರ ಆರೋಗ್ಯಕರವಾಗಿ ವಿಸ್ತರಣೆ ಆದಷ್ಟೂ ಮನುಷ್ಯ ಪರಿಸರ ಹೆಚ್ಚು ಆರೋಗ್ಯಕರವಾಗಿರುತ್ತದೆ. ಅರಣ್ಯದ ಉಳಿವು ಭೂಮಿಯ ಉಳಿವು ಎನ್ನುವುದನ್ನು ಮರೆಯಬಾರದು ಎಂದು ತಿಳಿಹೇಳಿದರು.
ಆನೆ ಮತ್ತು ಹುಲಿ ಸಂಪತ್ತಿನಲ್ಲಿ ನಮ್ಮ ರಾಜ್ಯ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ. ಇದರ ಜೊತೆಗೆ ಪ್ರಾಣಿ ಮತ್ತು ಮನುಷ್ಯರ ಸಂಘರ್ಷ ತಪ್ಪಬೇಕು, ಪ್ರಾಣಿಗಳು ಕಾಡು ಬಿಟ್ಟು ಹೊರಗೆ ಏಕೆ ಬರುತ್ತಿವೆ ಎಂಬ ಬಗ್ಗೆ ಅಧ್ಯಯನಗಳು ನಡೆದು ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ ಎಂದು ಮುಖ್ಯ ಮಂತ್ರಿಗಳು ಹೇಳಿದರು.
ದಿನೇ ದಿನೇ ಅರಣ್ಯ ಪ್ರದೇಶ ಕಡಿಮೆ ಆಗುತ್ತಿದ್ದರೆ ಮನುಷ್ಯ ಕುಲ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಅರಣ್ಯದ ಉಳಿವು ಮನುಷ್ಯನ ಉಳಿವು ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.
ಅರಣ್ಯ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆ, ಅರಣ್ಯ ರಾಯಬಾರಿ ಅನಿಲ್ ಕುಂಬ್ಳೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.