ಹುಣಸೂರು: ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂಬುದು ಕೇವಲ ಭಾಷಣಗಳಿಗೆ ಸೀಮಿತವಾದಂತಿದೆ.
ಏಕೆಂದರೆ ಎಷ್ಟೋ ಸರ್ಕಾರಿ ಶಾಲೆಗಳು ಕುಸಿಯುತ್ತಿವೆ, ಇನ್ನು ಕೆಲವೆಡೆ ಖಾಸಗಿ ವ್ಯಕ್ತಿಗಳು ದುರುಪಯೋಗಪಡಿಸಿದ್ದಾರೆ ಆದರೆ ಇದನ್ನೆಲ್ಲ ಕೇಳುವವರು ಹೇಳುವವರು ಯಾರು ಇಲ್ಲದಂತಾಗಿದೆ, ಹಾಗಾಗಿಯೇ ಸರ್ಕಾರಿ ಶಾಲೆಗಳು ಇನ್ನು ಅಭಿವೃದ್ಧಿಯಾಗದೆ ಹಾಗೆ ಉಳಿಯುತ್ತಿವೆ.
ಇದೆಲ್ಲ ಪೀಠಿಕೆ ಅಷ್ಟೇ. ಕೆಆರ್ ನಗರ ತಾಲೂಕು ಸಾಲಿಗ್ರಾಮದಲ್ಲಿ ಚೆನ್ನಾಗಿ ನಡೆಯುತ್ತಿದ್ದ ಸರಕಾರಿ ಶಾಲೆಯನ್ನೇ ಖಾಸಗಿ ವ್ಯಕ್ತಿಯೊಬ್ಬರು ಕೆಡವಿದ್ದಾರೆ, ಇದು ನಿಜಕ್ಕೂ ಅಕ್ಷಮ್ಯ ಅಪರಾಧ.

ಸರ್ಕಾರಿ ಶಾಲೆಗಳು ನಡೆಯುವುದೇ ಕಷ್ಟ. ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಾರೆ,ಅಂತದ್ದರಲ್ಲೂ ಅಲ್ಲೋ ಇಲ್ಲೋ ಒಂದೊಂದು ಸರ್ಕಾರಿ ಶಾಲೆಗಳು ಚೆನ್ನಾಗಿ ನಡೆಯುತ್ತಿದ್ದರೂ ಇಂತಹ ಖಾಸಗಿ ದುರುಳರಿಂದಾಗಿ ಶಾಲೆಗಳು ಮುಚ್ಚಿ ಹೋಗುವ ಸ್ಥಿತಿಗೆ ಬಂದಿದೆ.
ಸಾಲಿಗ್ರಾಮ ಪೊಲೀಸ್ ಠಾಣೆ ಹಿಂಭಾಗದಲ್ಲೇ ಸರ್ಕಾರಿ ಕನ್ನಡ ಶಾಲೆ ಇದೆ, ಸಮೀಪದ ಖಾಸಗಿ ವ್ಯಕ್ತಿ ತಮ್ಮ ಮನೆ ಸರಿ ಮಾಡಿಕೊಳ್ಳಲು ಈ ಶಾಲೆಯ ಕಟ್ಟಡ ಕೆಡವಿರುವುದು ಎಷ್ಟು ಸರಿ?.
ಇದೆಲ್ಲ ಗೊತ್ತಿದ್ದರೂ ಶಾಸಕರು,ಬಿಇಒ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಕ್ರೋಶದಿಂದ ಪ್ರಶ್ನಿಸಿದ್ದಾರೆ.
ಭಾನುವಾರ ಶಾಲೆಯ ಕಟ್ಟಡವನ್ನು ಕೆಡವಿದ್ದು ವಿಷಯ ತಿಳಿಯುತ್ತಿದ್ದಂತೆ ತಮ್ಮ ಪಕ್ಷದ ಸದಸ್ಯರೊಂದಿಗೆ ಸಾಲಿಗ್ರಾಮಕ್ಕೆ ತೆರಳಿದ ಚೆಲುವರಾಜು ಸರ್ಕಾರಿ ಶಾಲೆ ಕಟ್ಟಡ ಕೆಡ ವಿರುವುದನ್ನು ತೀವ್ರವಾಗಿ ಖಂಡಿಸಿದರು.
ಪೊಲೀಸ್ ಠಾಣೆಯಲ್ಲಿ ಈ ಕುರಿತು ವಿಚಾರಿಸಿದಾಗ ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ ಈಗಾಗಲೇ ವ್ಯಕ್ತಿಗೆ ಸೇರಿದ ಜೆಸಿಬಿ ಮತ್ತು ಟ್ರಾಕ್ಟರ್ ಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರೆಂದು ಚಲುವರಾಜು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದರು.
ಶಾಲಾ ಕಟ್ಟಡ ಕೆಡವಿದ ಖಾಸಗಿ ವ್ಯಕ್ತಿಯ ಮೇಲೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಈ ಶಾಲೆಯನ್ನು ಕೂಡಲೇ ದುರಸ್ತಿ ಮಾಡಿ ಮೊದಲಿನಂತೆ ಶಾಲೆ ನಡೆಯಬೇಕು ಇಲ್ಲದೆ ಹೋದಲ್ಲಿ ಸಾಲಿಗ್ರಾಮದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಚೆಲುವರಾಜು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದಲೇ ಇಂತಹ ಕೃತ್ಯಗಳು ನಡೆಯುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟ ಶಾಸಕರೇ ಉತ್ತರಿಸಬೇಕಿದೆ.
ಇದೆಲ್ಲ ಏನೇ ಆಗಲಿ ಸರ್ಕಾರಿ ಶಾಲೆಗಳನ್ನು ಉಳಿಸುವುದು ಬೆಳೆಸುವುದು ನಮ್ಮ ನಾಡಿನ ಎಲ್ಲರ ಕರ್ತವ್ಯವಾಗಿದೆ. ಸರ್ಕಾರಿ ಶಾಲೆಗಳನ್ನು ಕೆಡುವುವರು ಯಾರೇ ಆಗಿರಲಿ ಎಲ್ಲರೂ ಸೇರಿ ಖಂಡಿಸಬೇಕಿದೆ.
ಶಿಕ್ಷಣ ಸಚಿವರು ಕೂಡ ತಕ್ಷಣ ಇತ್ತ ಗಮನ ಹರಿಸಿ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲೇಬೇಕಿದೆ.